ನ್ಯೂಸ್

ಕಾಂಗ್ರೆಸ್​ಗೆ ಬಿಗ್​ ಶಾಕ್​! ಪಕ್ಷ ತೊರೆದ 170 ಶಾಸಕರು: ಸಮೀಕ್ಷೆಯಿಂದ ಬಯಲಾಯ್ತು ಸತ್ಯ...

ನವದೆಹಲಿ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷವನ್ನು ತೊರೆದು ಬೇರೆ ಪಕ್ಷಕ್ಕೆ ಹೋಗುವುದು ಹೊಸ ವಿಷಯವೇನಲ್ಲ. ತಮ್ಮ ಪಕ್ಷದಲ್ಲಿನ ಆಂತರಿಕ ಸ್ಫೋಟದಿಂದಾಗಿ ಮತ್ತೊಂದು ಪಕ್ಷವನ್ನು ಹುಡುಕಿ ಹೋಗುವುದು ಮಾಮೂಲಾಗಿದೆ.

ಇದರ ಬಗ್ಗೆ ಇದೀಗ ಸಮೀಕ್ಷೆ ನಡೆಸಲಾಗಿದ್ದು, ಇದು ಕಾಂಗ್ರೆಸ್​ ವಲಯದಲ್ಲಿ ಭಾರಿ ಆತಂಕವನ್ನು ಸೃಷ್ಟಿ ಮಾಡಿದೆ. ಇದಕ್ಕೆ ಕಾರಣ, 2016-2020ರ ಅವಧಿಯಲ್ಲಿ ನಡೆದ ಚುನಾವಣೆಯಲ್ಲಿ 170 ಶಾಸಕರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಗಳನ್ನು ಸೇರಿಕೊಂಡಿದ್ದಾರೆ ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಈ ಸಮೀಕ್ಷೆ ನಡೆಸಿದೆ. ಈ ಅವಧಿಯಲ್ಲಿ 170 ಕಾಂಗ್ರೆಸ್​ ಶಾಸಕರು ಪಕ್ಷ ತೊರೆದಿದ್ದರೆ, ಬಿಜೆಪಿಯನ್ನು ತೊರೆದ ಶಾಸಕರ ಸಂಖ್ಯೆ 18.

ಇದೇ ವೇಳೆ ಬಿಜೆಪಿಯ ಸಿದ್ಧಾಂತಗಳನ್ನು ಮೆಚ್ಚಿ ಆ ಪಕ್ಷಕ್ಕೆ ಸೇರಿರುವ ಶಾಸಕರ ಸಂಖ್ಯೆ 182 ಎಂದು ಈ ಸಮೀಕ್ಷೆ ಹೇಳಿದೆ. ಕಾಂಗ್ರೆಸ್​ ಮಾತ್ರವಲ್ಲದೇ ಬೇರೆ ಬೇರೆ ಪಕ್ಷಗಳಿಂದ 2016-2020ರ ಅವಧಿಯಲ್ಲಿ 182 ಮಂದಿ ಶಾಸಕರು ಬಿಜೆಪಿ ಸೇರಿದ್ದಾರೆ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಲೋಕಸಭಾ ಸಂಸದರು ಬಿಜೆಪಿಯನ್ನು ತೊರೆದು ಇತರ ಪಕ್ಷಗಳಿಗೆ ಸೇರಿದ್ದರೆ, ಏಳು ರಾಜ್ಯಸಭಾ ಸಂಸದರು ಕಾಂಗ್ರೆಸ್ ತೊರೆದು 2016-2020ರ ನಡುವೆ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತೊಂದು ಪಕ್ಷಕ್ಕೆ ಸೇರಿದ್ದಾರೆ ಎಂದು ವರದಿ ತಿಳಿಸಿದೆ.

ಮಧ್ಯಪ್ರದೇಶ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯ ವಿಧಾನಸಭೆಗಳಲ್ಲಿ ಇತ್ತೀಚೆಗೆ ಸರ್ಕಾರಗಳ ಪತನಕ್ಕೆ ಅವರ ಶಾಸಕರ ಪಕ್ಷಾಂತರ ಕಾರಣ ಎಂದು ವರದಿ ಹೇಳಿದೆ.