Vladimir Putin: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ 75 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೆ, ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಧಾನಿ ಮೋದಿಯ ಅಗಾಧ ಕೊಡುಗೆಯನ್ನು ಇದೆ ಎಂದು ರಷ್ಯಾ ಅಧ್ಯಕ್ಷ ಶ್ಲಾಘಿಸಿದ್ದಾರೆ.
ಈ ಬಗ್ಗೆ ಕ್ರೆಮ್ಲಿನ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪುಟಿನ್, ಆತ್ಮೀಯ ಪ್ರಧಾನ ಮಂತ್ರಿಗಳೇ, ದಯವಿಟ್ಟು ನಿಮ್ಮ 75 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸ್ವೀಕರಿಸಿ ಎಂದು ತಿಳಿಸಿದ್ದಾರೆ. ಭಾರತ ಮತ್ತು ರಷ್ಯಾ ನಡುವೆ ವಿಶೇಷ ಪಾಲುದಾರಿಕೆಯನ್ನು ನಿರ್ಮಿಸುವ ಕಡೆಗೆ ಮೋದಿಯ ಬದ್ಧತೆಯನ್ನು ಪುಟಿನ್ ಎತ್ತಿ ತೋರಿಸಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತವು ರಷ್ಯಾ ಜತೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರವು ಗಮನಾರ್ಹವಾಗಿ ಬೆಳೆದಿದೆ ಪುಟಿನ್ ಹೇಳಿದ್ದಾರೆ.
ಭಾರತದ ಪ್ರಧಾನಿಯಾಗಿ ಮೋದಿ ತಮ್ಮ ದೇಶವಾಸಿಗಳಿಂದ ಮತ್ತು ವಿಶ್ವ ವೇದಿಕೆಯಲ್ಲಿ ಅಗಾಧ ಗೌರವವನ್ನು ಗಳಿಸಿದ್ದಾರೆ ಎಂದು ಪುಟಿನ್ ತಿಳಿಸಿದ್ದಾರೆ. ಅಲ್ಲದೆ, ಮೋದಿ ನಾಯಕತ್ವದಲ್ಲಿ ಭಾರತ ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಪುಟಿನ್ ಶ್ಲಾಘಿಸಿದ್ದಾರೆ.
ಕಳೆದ ತಿಂಗಳು ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪುಟಿನ್ ಮತ್ತು ಮೋದಿ ಕೊನೆಯ ಬಾರಿಗೆ ಭೇಟಿಯಾಗಿದ್ದರು. ಈ ಚರ್ಚೆಗಳು ಜಾಗತಿಕ ವ್ಯವಹಾರಗಳಲ್ಲಿ ಹೆಚ್ಚುತ್ತಿರುವ ಭಾರತ-ರಷ್ಯಾ ಸಂಬಂಧದ ಬಲವನ್ನು ತೋರಿಸಿದೆ.
ಇಂದು 75ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವಾರು ವಿಶ್ವ ನಾಯಕರು ಶುಭಾಶಯ ಕೋರಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಒಳ್ಳೆಯ ಸ್ನೇಹಿತ ಎಂದು ಸಂಭೋಧಿಸಿದ್ದಾರೆ. ಅಲ್ಲದೆ, ನೀವು ನಿಮ್ಮ ಜೀವನದಲ್ಲಿ ಭಾರತಕ್ಕಾಗಿ ತುಂಬಾ ಸಾಧನೆ ಮಾಡಿದ್ದೀರಿ. ನಾವು ಒಟ್ಟಾಗಿ ಭಾರತ ಮತ್ತು ಇಸ್ರೇಲ್ ನಡುವಿನ ಸ್ನೇಹದಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ. ನಮ್ಮ ಪಾಲುದಾರಿಕೆ ಮತ್ತು ನಮ್ಮ ಸ್ನೇಹವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಇಸ್ರೇಲ್ ಪ್ರಧಾನಿ ತಿಳಿಸಿದ್ದಾರೆ.
ಪ್ರಧಾನಿ ಮೋದಿಯ 75 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ತುಂಬಾ ಸಂತೋಷವಾಗಿದೆ ಎಂದು ಭಾರತೀಯ ಮೂಲದ ಯುಕೆ ಮಾಜಿ ಪ್ರಧಾನಿ ಸುನಕ್ ಹೇಳಿದ್ದಾರೆ. ಈ ಅನಿಶ್ಚಿತ ಕಾಲದಲ್ಲಿ, ನಮಗೆಲ್ಲರಿಗೂ ಒಳ್ಳೆಯ ಸ್ನೇಹಿತರು ಬೇಕು. ಮೋದಿ ಜೀ ಯಾವಾಗಲೂ ನನಗೆ ಮತ್ತು ಬ್ರಿಟನ್‌ಗೆ ಉತ್ತಮ ಸ್ನೇಹಿತರಾಗಿದ್ದಾರೆ. ಯುಕೆ-ಭಾರತ ಸಂಬಂಧಗಳು ಬಲದಿಂದ ಬಲಕ್ಕೆ ಹೋಗುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಸುನಕ್ ಹೇಳಿದ್ದಾರೆ. (ಏಜೆನ್ಸೀಸ್)