ನ್ಯೂಸ್

ಡ್ರಗ್ಸ್​ ಅಮಲಿನಿಂದ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡ ಯುವಕ: ಬದುಕುಳಿದಿದ್ದೇ ಅಚ್ಚರಿ!

ಮಾಸ್ಕೋ: ಜೊಂಬಿ ಡ್ರಗ್ಸ್ ಸ್ಪೈಸ್​​ ಮತ್ತು ನೋವು ನಿವಾರಕ ಕಾಕ್ಟೈಲ್​ ಸೇವಿಸಿ 29 ವರ್ಷದ ರಷ್ಯಾ ಯುವಕನೊಬ್ಬ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ.

ಯುವಕನ ಗುರುತು ಇನ್ನು ಪತ್ತೆಯಾಗಿಲ್ಲ. ಆದರೆ, ಘಟನೆ ಮಾಸ್ಕೋದಿಂದ 2,100 ಮೈಲಿ ದೂರ ಇರುವ ಪ್ರೊಕೊಪಿವಸ್ಕ್​ ಪಟ್ಟಣದಲ್ಲಿ ನಡೆದಿದೆ. ತನ್ನ ಎಡಗಾಲಿನ ಮಂಡಿಯ ಮೇಲಿನಿಂದ ಕೆಳಗಿನವರೆಗೂ ಕತ್ತರಿಸಿಕೊಂಡಿದ್ದಾನೆ.

ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ತ ಸೋರಿಕೆ ತಡೆದಿರುವುದರಿಂದ ಬದುಕುಳಿದಿದ್ದಾನೆ. ಆದರೆ, ತನ್ನ ಕಾಲನ್ನು ಕಳೆದುಕೊಂಡಿದ್ದಾನೆ.

ಸ್ಪೈಸ್​ ಒಂದು ಪ್ರಸಿದ್ಧ ಸಿಂಥೆಟಿಕ್​ ಡ್ರಗ್ಸ್​ ಆಗಿದ್ದು, ಅದನ್ನು ಸೇವಿಸಿದರೆ ಅವರನ್ನು ಜೊಂಬಿ(ಜೊಂಬಿ ಸಿನಿಮಾದಲ್ಲಿ ಬರುವ ಭಯಾನಕ ಪಾತ್ರ) ಸ್ಥಿತಿಗೆ ಕೊಂಡೊಯ್ಯುತ್ತದೆ. ಜೊಂಬಿ ಸ್ಪೈಸ್​ ಇತ್ತೀಚಿನ ವರ್ಷಗಳಲ್ಲಿ ಬ್ರಿಟನ್ ಮತ್ತು ಇತರೆಡೆಗಳಲ್ಲಿ ಕುಖ್ಯಾತಿಯನ್ನು ಗಳಿಸಿದೆ.

ಇದನ್ನು ಮಾನವ ನಿರ್ಮಿತ ಕೆಮಿಕಲ್ಸ್​ ಜತೆಗೆ ಗಿಡಮೂಲಿಕೆಗಳು ಅಥವಾ ಚೂರುಚೂರು ಸಸ್ಯ ವಸ್ತುಗಳನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. (ಏಜೆನ್ಸೀಸ್​)