ನ್ಯೂಸ್

ಯುಕ್ರೇನ್​ ಮೇಲೆ ರಷ್ಯಾ ಡ್ರೋನ್​ ದಾಳಿ: ಐದು ಮಂದಿ ಬಲಿ, 18 ಜನರಿಗೆ ಗಂಭೀರ ಗಾಯ| Ukraine

Ukraine: ಯುಕ್ರೇನ್‌ನ ಖಾರ್ಕಿವ್ ನಗರದಲ್ಲಿರುವ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಮೇಲೆ ರಷ್ಯಾ ದಾಳಿ ಮಾಡಿದ್ದು, ಡ್ರೋನ್ ದಾಳಿಯಲ್ಲಿ ಐದು ಜನರು ಮೃತಪಟ್ಟಿದ್ದು, 18 ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ಸೋಮವಾರ (ಆಗಸ್ಟ್​,18) ಯುಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ದಾಳಿಯ ಬಗ್ಗೆ ಟೆಲಿಗ್ರಾಮ್‌ನಲ್ಲಿ ತಿಳಿಸಿರುವ ಖಾರ್ಕಿವ್ ಪ್ರದೇಶದ ಗವರ್ನರ್ ಒಲೆಗ್ ಸಿನೆಗುಬೊವ್, ಬೆಳಗಿನ ಜಾವ ನಡೆದ ಈ ದಾಳಿಯಲ್ಲಿ ಕಟ್ಟಡದ ಒಂದು ಭಾಗ ಸಂಪೂರ್ಣವಾಗಿ ನಾಶವಾಗಿ, ಕನಿಷ್ಠ ಮೂರು ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ, ರಷ್ಯಾ ಕಟ್ಟಡದ ಮೇಲೆ ನಾಲ್ಕು ಡ್ರೋನ್‌ಗಳನ್ನು ಹಾರಿಸಿತು ಎಂದು ಹೇಳಿದ್ದಾರೆ.

ಈ ದಾಳಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಯುಕ್ರೇನ್​ ಪ್ರಾಸಿಕ್ಯೂಷನ್ ಸೇವೆಯು, ಸುಮಾರು ಒಂದೂವರೆ ವರ್ಷದ ಬಾಲಕಿ ಸೇರಿದಂತೆ ಐದು ಜನರು ಸಾವನ್ನಪ್ಪಿದ್ದು, ಕನಿಷ್ಠ 18 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.​

ಕಳೆದ ಮೂರುವರೆ ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳು ವಾಷಿಂಗ್ಟನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆ ಸಭೆ ನಡೆಸಲಿವೆ. ಇದರ ನಡುವೆಯೇ ರಷ್ಯಾ, ಯುಕ್ರೇನ್​ ಮೇಲೆ ದಾಳಿ ಮಾಡಿದೆ.

ಅಮೆರಿಕದ ರಾಜಧಾನಿಗೆ ಝೆಲೆನ್ಸ್ಕಿ ಆಗಮನಕ್ಕೂ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವವಾದ ಘೋಷಣೆ ಮಾಡಿದ್ದು, ಉಕ್ರೇನ್ ಸ್ವಾಧೀನಪಡಿಸಿಕೊಂಡ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ಮರಳಿ ಪಡೆಯಲು ಅಥವಾ ಶಾಂತಿ ಒಪ್ಪಂದದ ಭಾಗವಾಗಿ NATOಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)