Russian Drone Attack: ರಷ್ಯಾವು ಉಕ್ರೇನ್ ಮೇಲೆ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ವೈಮಾನಿಕ ಬಾಂಬ್‌ಗಳನ್ನು ಹಾರಿಸಿದೆ. ಈ ದಾಳಿಯಲ್ಲಿ ಕನಿಷ್ಠ ಐದು ನಾಗರಿಕರು ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಝೆಲೆನ್ಸ್ಕಿ, ರಷ್ಯಾವು 50 ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಸುಮಾರು 500 ದಾಳಿ ಡ್ರೋನ್‌ಗಳನ್ನು ಎಲ್ವಿವ್, ಇವಾನೋ-ಫ್ರಾಂಕಿವ್ಸ್ಕ್, ಜಪೋರಿಝಿಯಾ, ಚೆರ್ನಿಹಿವ್, ಸುಮಿ, ಖಾರ್ಕಿವ್, ಖೆರ್ಸನ್, ಒಡೆಸಾ ಮತ್ತು ಕಿರೊವೊಹ್ರಾದ್‌ನಂತಹ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಕಿಡಿಕಾರಿದ್ದಾರೆ.
ಮುಂದುವರೆದು ಮಾತನಾಡಿದ ಝೆಲೆನ್ಸ್ಕಿ, ದಾಳಿ ಪೀಡಿತ ಪ್ರದೇಶಗಳಲ್ಲಿ ಪರಿಣಾಮಗಳನ್ನು ತೊಡೆದುಹಾಕಲು ತಮ್ಮ ಸರ್ಕಾರ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಯುಕ್ರೇನ್‌ನಲ್ಲಿನ ಯುದ್ಧವು ಕೊನೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಝೆಲೆನ್ಸ್ಕಿ ಅಮೆರಿಕ ಮತ್ತು ಯುರೋಪ್ಗಳನ್ನು ಒತ್ತಾಯಿಸಿದ್ದಾರೆ.
ಇಂದು, ರಷ್ಯನ್ನರು ಮತ್ತೊಮ್ಮೆ ನಮ್ಮ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ವೈಮಾನಿಕ ಭಯೋತ್ಪಾದನೆಯನ್ನು ಯಾವುದೇ ಅರ್ಥದಿಂದ ತೆಗೆದುಹಾಕಲು ನಮಗೆ ಹೆಚ್ಚಿನ ರಕ್ಷಣೆ ಮತ್ತು ಎಲ್ಲಾ ರಕ್ಷಣಾ ಒಪ್ಪಂದಗಳ ವೇಗದ ಅನುಷ್ಠಾನದ ಅಗತ್ಯವಿದೆ. ವಿಶೇಷವಾಗಿ ವಾಯು ರಕ್ಷಣೆಯ ಮೇಲೆ. ಆಕಾಶದಲ್ಲಿ ಏಕಪಕ್ಷೀಯ ಕದನ ವಿರಾಮ ಸಾಧ್ಯ ಮತ್ತು ಇದು ನಿಜವಾದ ರಾಜತಾಂತ್ರಿಕತೆಗೆ ದಾರಿ ತೆರೆಯಬಹುದು ಎಂದು ಝೆಲೆನ್ಸ್ಕಿ ಪ್ರತಿಪಾದಿಸಿದ್ದಾರೆ.
ಶೋಸ್ಟ್ಕಾದ ಯುಕ್ರೇನಿಯನ್ ರೈಲು ನಿಲ್ದಾಣವನ್ನು ಗುರಿಯಾಗಿಸಿಕೊಂಡು ನಡೆದ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಒಂದು ದಿನದ ನಂತರ ರಷ್ಯಾ ಈ ಹೊಸ ದಾಳಿ ನಡೆಸಿದೆ. ಅಲ್ಲದೆ, ಘಟನೆಯಲ್ಲಿ 71 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಯುಕ್ರೇನ್‌ನ ಎರಡು ರೈಲುಗಳನ್ನು ಹಾಗೂ ಸ್ಥಳೀಯ ಪ್ರಯಾಣಿಕ ಸೇವೆ ಮತ್ತು ಕೈವ್‌ಗೆ ಹೋಗುವ ಒಂದು ರೈಲುಗಳನ್ನು ರಷ್ಯಾ ಗುರಿಯಾಗಿಸಿಕೊಂಡಿದೆ ಎಂದು ಯುಕ್ರೇನಿಯನ್ ಉಪ ಪ್ರಧಾನ ಮಂತ್ರಿ ಒಲೆಕ್ಸಿ ಕುಲೆಬಾ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಕುಲೆಬಾ, ಶೋಸ್ಟ್ಕಾದ ರೈಲು ನಿಲ್ದಾಣದ ಬಳಿ ರಷ್ಯಾ ಎರಡು ಬಾರಿ ದಾಳಿ ಮಾಡಿದೆ. ಮೊದಲನೆಯದಾಗಿ, ಪ್ರಯಾಣಿಕರ ರೈಲು ಸ್ಥಳಾಂತರಿಸುವ ಸಮಯದಲ್ಲಿ, ವಿದ್ಯುತ್ ಲೋಕೋಮೋಟಿವ್ ಮೇಲೆ ಎರಡನೇ ದಾಳಿ ನಡೆಸಲಾಯಿತು. ಕೆಲವು ಪ್ರಯಾಣಿಕರು ಮತ್ತು ರೈಲ್ವೆ ಕಾರ್ಮಿಕರು ಗಾಯಗೊಂಡಿದ್ದಾರೆ. ರಷ್ಯಾ ಮತ್ತೊಮ್ಮೆ ಉದ್ದೇಶಪೂರ್ವಕವಾಗಿ ಜನರು ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)