ನ್ಯೂಸ್

ಜಗಳವಾಡಿ ಮನೆ ಬಿಟ್ಟು ಹೋದ ಬಾಲಕಿಯನ್ನು ಡ್ರಾಪ್ ನೆಪದಲ್ಲಿ ರೇಪ್​ ಮಾಡಿ ಕೊಲೆಗೈದ ದಂಪತಿ

ಮಾಸ್ಕೋ: ಪಾಲಕರೊಂದಿಗೆ ಜಗಳವಾಡಿ ಮನೆಬಿಟ್ಟು ಹೋಗಿದ್ದ 8 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದಾಗಿ ರಷ್ಯಾ ಪೊಲೀಸರು ತಿಳಿಸಿದ್ದಾರೆ.

ನಾಪತ್ತೆಯಾಗಿದ್ದ ಬಾಲಕಿಯನ್ನು ವಿಕಾ ತೆಪ್ಲಿಕೋವಾ ಎಂದು ಗುರುತಿಸಲಾಗಿದೆ. ಕೊನೆಯ ಬಾರಿಗೆ ಸಿಸಿಟಿವಿ ಕ್ಯಾಮೆರಾದಲ್ಲಿ ವಿಕಾ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವುದನ್ನು ಕಂಡ ಬಳಿಕ ಆಕೆಯನ್ನು ಪತ್ತೆಹಚ್ಚಲು 500 ಮಂದಿ ಸ್ವಯಂಪ್ರೇರಿತರಾಗಿ ಹುಡುಕಾಟಕ್ಕೆ ಇಳಿದಿದ್ದರು.

ನೀಲಿ ಬಣ್ಣದ ಶಾರ್ಟ್ಸ್ ಧರಿಸಿ, ಟಿ-ಶರ್ಟ್ಸ್​ ಹಾಕಿಕೊಂಡು ವಿಕಾ ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿರುವುದು ದೃಶ್ಯ ಸಿಸಿಟಿವಿಯಲ್ಲಿತ್ತು. ಅದೇ ಪಟ್ಟಣದಲ್ಲಿ ವಾಸಿಸುವ ಫ್ರೆಂಡ್ಸ್​ ಮನೆಗೆ ತೆರಳುತ್ತಿದ್ದಳು ಎನ್ನಲಾಗಿದೆ.

32 ವರ್ಷದ ಮಹಿಳೆಯೊಬ್ಬಳು ತಾನು ಮತ್ತು ತನ್ನ ಪತಿ ಬಾಲಕಿಗೆ ಕಾರಿನಲ್ಲಿ ಲಿಫ್ಟ್​ ನೀಡಿದೆವು ಎಂದು ರಷ್ಯಾ ಪೊಲೀಸರಿಗೆ ಹೇಳಿಕೆ ನೀಡುವುದಕ್ಕೂ ಮೂರು ದಿನಗಳ ಮುಂಚೆ ವಿಕಾ ಕಾಣೆಯಾಗಿದ್ದಳು. ದಂಪತಿಯನ್ನು ಇಗೋರ್​ ಮತ್ತು ಕ್ರಿಸ್ಟಿನಾ ವೊರ್ನಿಕೋವ್​ ಎಂದು ಗುರುತಿಸಲಾಗಿದ್ದು, ಅನುಮಾನಗೊಂಡು ಪೊಲೀಸ್​ ದಂಪತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರಿನಲ್ಲಿ ಬರುತ್ತಿದ್ದ ದಂಪತಿ ಮಾರ್ಗ ಮಧ್ಯದಲ್ಲಿ ಡ್ರಾಪ್​ ಕೊಡುವುದಾಗಿ ಬಾಲಕಿಯನ್ನು ಕಾರು ಹತ್ತಿಸಿಕೊಂಡಿದ್ದಾರೆ. ಇದರ ನಡುವೆ ಬಾಲಕಿಯ ಮೇಲೆ ವಕ್ರದೃಷ್ಟಿ ಬೀರಿದ ಪತಿ ಆಕೆಯ ಮೇಲೆ ದಾಳಿ ಮಾಡುವುದಾಗಿ ಪತ್ನಿಗೆ ಹೇಳಿದ್ದಾನೆ. ಆದರೆ, ಪತಿ ಕಂಡರೆ ಮೊದಲೇ ಭಯಪಡುತ್ತಿದ್ದ ಪತ್ನಿ ಬೇಡ ಎಂದು ಹೇಳಲು ಹೆದರಿದ್ದಾಳೆ. ಬಳಿಕ ಬಾಲಕಿಯನ್ನು ಅತ್ಯಾಚಾರ ಮಾಡಿ, ಉಸಿರುಗಟ್ಟಿಸಿ ಕೊಂದು ಪ್ಲ್ಯಾಸ್ಟಿಕ್​ ಬ್ಯಾಗ್​ನಲ್ಲಿ ಮುಚ್ಚಿ ಸಮೀದಲ್ಲೇ ಎಸೆದಿದ್ದಾರೆ. ಬಾಲಕಿ ಸೋಮವಾರ ಸಾವಿಗೀಡಾಗಿದ್ದು, ಅದೇ ದಿನ ಆಕೆ ಕಾಣೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೆರೆಯೊಂದರ ಬಳಿ ಪ್ಲ್ಯಾಸ್ಟಿಕ್​ ಬ್ಯಾಗ್​ನಿಂದ ಮುಚ್ಚಲಾಗಿದ್ದ ಬಾಲಕಿಯ ಶವವನ್ನು ಆರೋಪಿ ಮಹಿಳೆ ತೋರಿಸಿದ್ದಾಳೆ. ಆರಂಭದಲ್ಲಿ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ತದನಂತರ ತಪ್ಪಿನ ಅರಿವಾಗಿ ಎಲ್ಲ ಸತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.

ಸದ್ಯ ದಂಪತಿಯನ್ನು ಬಂಧಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಅಂದಹಾಗೆ ಬಾಲಕಿ ಜಪಾನ್‌ನ ಉತ್ತರದ ಪೆಸಿಫಿಕ್ ದ್ವೀಪವಾದ ಸಖಾಲಿನ್ ದ್ವೀಪದಲ್ಲಿರುವ ನೊವೊಲೆಕ್ಸಂಡ್ರೊವ್ಸ್ಕ್ ನಗರದಲ್ಲಿ ಕಾಣೆಯಾಗಿದ್ದಳು. (ಏಜೆನ್ಸೀಸ್​)