ನ್ಯೂಸ್

ರಷ್ಯಾ-ಯುಕ್ರೇನ್ ಯುದ್ಧ: ಸೋಮವಾರ ಡೊನಾಲ್ಡ್​ ಟ್ರಂಪ್ ಜತೆ ಯುಕ್ರೇನ್​ ಅಧ್ಯಕ್ಷ  ಝೆಲೆನ್ಸ್ಕಿಮಾತುಕತೆ| Volodymyr Zelensky

Volodymyr Zelensky: ಅಲಾಸ್ಕಾದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಟ್ರಂಪ್ ಅವರ ಉನ್ನತ ಮಟ್ಟದ ಶೃಂಗಸಭೆಯ ನಂತರ, ಸೋಮವಾರ ವಾಷಿಂಗ್ಟನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಯೋಜನೆಯನ್ನು ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೃಢಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಯುಕ್ರೇನ್ ಅಧ್ಯಕ್ಷ, ಅಮೆರಿಕ ಅಧ್ಯಕ್ಷ ಟ್ರಂಪ್​ರೊಂದಿಗೆ ದೀರ್ಘ ಮತ್ತು ಅರ್ಥಪೂರ್ಣ ಮಾತುಕತೆ ನಡೆಸಿದ್ದೇನೆ. ಟ್ರಂಪ್​ರೊಂದಿಗೆ ಸಂಭಾಷಣೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆಯಿತು ಎಂದು ತಿಳಿಸಿದ್ದಾರೆ.

ಅಲ್ಲದೆ, ಈ ಸಂಭಾಷಣೆಯಲ್ಲಿ ಟ್ರಂಪ್​ಯೂ ಇತ್ತೀಚಿನ ಪುಟಿನ್ ಅವರೊಂದಿಗೆ ನಡೆದ ಶೃಂಗಸಭೆಯ ವಿಮರ್ಶೆಯೂ ಸೇರಿತ್ತು, ಅಮೆರಿಕ ಅಧ್ಯಕ್ಷರು ರಷ್ಯಾದ ನಾಯಕನೊಂದಿಗಿನ ತಮ್ಮ ಭೇಟಿಯ ಪ್ರಮುಖ ಅಂಶಗಳನ್ನು ಹಂಚಿಕೊಂಡರು ಎಂದು ಬರೆದುಕೊಂಡಿದ್ದಾರೆ.

ತ್ರಿಪಕ್ಷೀಯ ಸಭೆಗೆ ಟ್ರಂಪ್ ಪ್ರಸ್ತಾವನೆ

ಅಮೆರಿಕ ಅಧ್ಯಕ್ಷ ಟ್ರಂಪ್, ಉಕ್ರೇನ್, ಅಮೆರಿಕ ಮತ್ತು ರಷ್ಯಾಗಳನ್ನು ಒಳಗೊಂಡ ತ್ರಿಪಕ್ಷೀಯ ಸಭೆಯನ್ನು ಪ್ರಸ್ತಾಪಿಸಿದರು. ಈ ವಿಚಾರಕ್ಕೆ ಝೆಲೆನ್ಸ್ಕಿ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ತ್ರಿಪಕ್ಷೀಯ ಸಭೆಗಾಗಿ ಟ್ರಂಪ್ ಪ್ರಸ್ತಾಪವನ್ನು ನಾವು ಬೆಂಬಲಿಸುತ್ತೇವೆ ಎಂದು ಝೆಲೆನ್ಸ್ಕಿ ಹೇಳಿದರು.

ಝೆಲೆನ್ಸ್ಕಿ-ಟ್ರಂಪ್ ಸಭೆ

ಸೋಮವಾರದ ವಾಷಿಂಗ್ಟನ್ ಭೇಟಿಯು ಯುದ್ಧವನ್ನು ಕೊನೆಗೊಳಿಸುವ ಮಾರ್ಗವನ್ನು ವಿವರವಾಗಿ ಚರ್ಚಿಸಲು ಒಂದು ಅವಕಾಶವಾಗಲಿದೆ ಎಂದು ಝೆಲೆನ್ಸ್ಕಿ ದೃಢಪಡಿಸಿದರು. ಸೋಮವಾರ, ನಾನು ವಾಷಿಂಗ್ಟನ್,ಡಿಸಿಯಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಿ, ಹತ್ಯೆ ಮತ್ತು ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಎಲ್ಲಾ ವಿವರಗಳನ್ನು ಚರ್ಚಿಸುತ್ತೇನೆ" ಎಂದು ಝೆಲೆನ್ಸ್ಕಿ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಮುಂದುವರೆದು ಮಾತನಾಡಿದ ಯುಕ್ರೇನ್​ ಅಧ್ಯಕ್ಷ, ಟ್ರಂಪ್ ಅವರನ್ನು ಭೇಟಿ ಮಾಡಲು ಆಹ್ವಾನ ನೀಡಿದ್ದಕ್ಕಾಗಿ ಝೆಲೆನ್ಸ್ಕಿ ಕೃತಜ್ಞತೆ ಸಲ್ಲಿಸಿದರು ಮತ್ತು ಅಂತರರಾಷ್ಟ್ರೀಯ ಸಹಕಾರದ ಅಗತ್ಯವನ್ನು ಪುನರುಚ್ಚರಿಸಿದರು. ಅಮೆರಿಕದೊಂದಿಗೆ ವಿಶ್ವಾಸಾರ್ಹ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಯುರೋಪಿಯನ್ನರ ಬೆಂಬಲ ಪ್ರತಿ ಹಂತದಲ್ಲೂ ಮುಖ್ಯ" ಎಂದು ತಿಳಿಸಿದ್ದಾರೆ.

ನಾವು ಎಲ್ಲಾ ಪಾಲುದಾರರೊಂದಿಗೆ ನಮ್ಮ ಸ್ಥಾನಗಳನ್ನು ಸಮನ್ವಯಗೊಳಿಸುವುದನ್ನು ಮುಂದುವರಿಸುತ್ತೇವೆ. ಸಹಾಯ ಮಾಡುತ್ತಿರುವ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಝೆಲೆನ್ಸ್ಕಿ ಹೇಳಿದರು.ಅಲ್ಲದೆ, ಯುಕ್ರೇನ್ ಹೋರಾಟದಲ್ಲಿ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.(ಏಜೆನ್ಸೀಸ್​)