ನ್ಯೂಸ್

ಜಗತ್ತಿಗೆ ಸ್ವಾವಲಂಬನೆ ಪಾಠ ಕಲಿಸಿದೆ ರಷ್ಯಾ; ನಮ್ಮದು ಬರೀ ಮಾತು; ಶಿವಸೇನೆ ಹೇಳಿಕೆ ಟಾರ್ಗೆಟ್​ ಯಾರು?

ಮುಂಬೈ: ಕರೊನಾ ನಿಗ್ರಹಕ್ಕಾಗಿ ಲಸಿಕೆಯನ್ನು ಸಂಶೋಧಿಸುವ ಮೂಲಕ ಇಡೀ ಜಗತ್ತಿಗೆ ರಷ್ಯಾ ಸ್ವಾವಲಂಬನೆಯ (ಆತ್ಮನಿರ್ಭರ್​) ಪಾಠ ಕಲಿಸಿದೆ. ಆದರೆ, ಭಾರತದಲ್ಲಿ ಸ್ವಾವಲಂಬನೆ ಕೇವಲ ಮಾತಿನಲ್ಲಾಗುತ್ತಿದೆ ಎಂದು ಶಿವಸೇನೆ ನಾಯಕ, ಸಂಸದ ಸಂಜಯ್​ ರಾವತ್​ ಟೀಕಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಸರ್ಕಾರವೇ ಸ್ವಂತ ಬಲದಲ್ಲಿ ಕರೊನಾ ಲಸಿಕೆ ಸಿದ್ಧಪಡಿಸಿದ್ದನ್ನು ಘೋಷಿಸಿದ್ದಾರೆ. ಅದರ ತನ್ನ ದೇಶದಲ್ಲಿಯೇ ನೋಂದಣಿ ಮಾಡಿದ್ದಾಗಿ ಹೇಳಿದ್ದಾರೆ. ಜತೆಗೆ, ಅವರ ಮಗಳು ಕೂಡ ದೇಶಿಯವಾಗಿ ಸಿದ್ಧಪಡಿಸಿದ ಲಸಿಕೆ ಪಡೆದಿದ್ದಾರೆ.

ರಷ್ಯನ್​ ಲಸಿಕೆ ನಿಯಮಬಾಹಿರ, ಪರಿಣಾಮಕಾರಿಯಲ್ಲ ಎಂದೆಲ್ಲ ಸಾಧಿಸಲು ಜಾಗತಿಕವಾಗಿ ಸಂಚು ನಡೆದಾಗ, ಪುಟಿನ್​ ಆ ಲಸಿಕೆಯನ್ನು ಮಗಳ ಮೇಲೆಯೇ ಪ್ರಯೋಗಿಸಲು ಅವಕಾಶ ನೀಡಿದರು. ಜತೆಗೆ ಇಡೀ ದೇಶದಲ್ಲಿ ಭರವಸೆಯ ಅಲೆಯನ್ನು ಮೂಡಿಸಿದರು ಎಂದು ಸಂಜಯ್​ ರಾವತ್​ ಹೇಳಿದ್ದಾರೆ.

ಆತ್ಮನಿರ್ಭರವೆಂದರೆ ಹೇಗಿರಬೇಕು ಎಂಬ ಬಗ್ಗೆ ರಷ್ಯಾ ಇಡೀ ಜಗತ್ತಿಗೆ ಮೊದಲ ಪಾಠ ಕಲಿಸಿದೆ. ಆದರೆ, ನಾವು ಬರೀ ಬಾಯಿ ಮಾತಿನಲ್ಲೇ ಹೇಳಿಕೊಳ್ಳುತ್ತಿದ್ದೇವೆ ಅಷ್ಟೇ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ರಾಮ ಮಂದಿರ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದ ಮಹಾಂತ ನೃತ್ಯ ಗೋಪಾಲ ದಾಸರು ಕೋವಿಡ್​ಗೆ ಒಳಗಾಗಿದ್ದರೂ ಪ್ರಧಾನಿ ಏಕೆ ಕ್ವಾರಂಟೈನ್​ ಪಾಲಿಸುತ್ತಿಲ್ಲ ಎಂದು ರಾವತ್ ಪ್ರಶ್ನಿಸಿದ್ದಾರೆ.

ಈ ನಡುವೆ, ಕರೊನಾ ನಿವಾರಿಸುವ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ 9 ಔಷಧಗಳಲ್ಲಿ ರಷ್ಯಾ ಕಂಡುಹಿಡಿದಿದ್ದನ್ನು ಪರಿಗಣಿಸದೇ ಇರಲು ವಿಶ್ವ ಸಂಸ್ಥೆ ನಿರ್ಧರಿಸಿದೆ. ಆದರೆ, ಸೌದಿ, ಫಿಲಿಫೈನ್ಸ್​ ಹಾಗೂ ಬ್ರೆಜಿಲ್​ ದೇಶಗಳು ರಷ್ಯನ್​ ಲಸಿಕೆಯ ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ ನೀಡಿವೆ.