ನ್ಯೂಸ್

ಕದನ ವಿರಾಮದಲ್ಲಿ ಟ್ರಂಪ್ ಮಾತಿಗಿಲ್ಲ ಬೆಲೆ! 6,000 ಯುಕ್ರೇನ್​ ಸೈನಿಕರ ಮೃತದೇಹ ಹಸ್ತಾಂತರಿಸಲು ರಷ್ಯಾ ಸಮ್ಮತಿ | Swap Deal

Swap Deal: ನಿನ್ನೆಯಷ್ಟೇ (ಜೂ.02) ಇಸ್ತಾನ್​ಬುಲ್​ನಲ್ಲಿ ನಡೆದ ಎರಡನೇ ಸುತ್ತಿನ ಕದನ ವಿರಾಮ ಮಾತುಕತೆಯಲ್ಲಿ ರಷ್ಯಾ ಮತ್ತು ಯುಕ್ರೇನ್​ ಪ್ರತಿನಿಧಿಗಳು ಭಾಗಿಯಾಗಿದ್ದರು. ಮೂರು ವರ್ಷಗಳ ಯುದ್ಧಕ್ಕೆ ಮುಕ್ತಾಯ ಹಾಡುವ ದಿಟ್ಟ ಯೋಚನೆಯಲ್ಲಿದ್ದ ದೇಶಗಳ ನಡುವೆ ಇದೀಗ ಮತ್ತೆ ಸಮರದ ಕಾಡ್ಗಿಚ್ಚು ಹೆಚ್ಚಿದೆ. ಕದನ ವಿರಾಮದ ಮಾತುಕತೆ ಅರ್ಧಕ್ಕೆ ಮುರಿದುಬಿದ್ದಿದೆ. ಅದಕ್ಕೆ ಕಾರಣ, ರಷ್ಯಾ ಮೇಲೆ ಯುಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿ.

ಭಾರತ-ಪಾಕ್​ ಕದನ ವಿರಾಮದಲ್ಲಿ ಮಧ್ಯಸ್ಥಿಕೆ ವಹಿಸಿದ್ದನ್ನು ಬಡಾಯಿ ಕೊಚ್ಚಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​, ಇದೀಗ ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧ ಕೊನೆಗೊಳಿಸಲು ಶಾಂತಿ ಮಾತುಕತೆಗೆ ಆಹ್ವಾನಿಸಿದ್ದಾರೆ. ಆದ್ರೆ, ಇದಕ್ಕೆ ರಷ್ಯಾ ಕಿಂಚಿತ್ತು ಒಪ್ಪಿಗೆ ಸೂಚಿಸಿಲ್ಲ. ಕದನ ವಿರಾಮ ಮಾತುಕತೆ ತಿರಸ್ಕರಿಸುವ ಮೂಲಕ ಟ್ರಂಪ್​ಗೆ ತಿರುಗೇಟು ನೀಡಿದೆ. ಇಷ್ಟಾದರೂ ಶ್ವೇತಭವನ, ಟ್ರಂಪ್​ ಕದನ ವಿರಾಮ ಮಾತುಕತೆಗೆ ಎರಡೂ ದೇಶಗಳ ನಾಯಕರನ್ನು ಅಮೆರಿಕ ಅಧ್ಯಕ್ಷರು ಆಹ್ವಾನಿಸಿದ್ದಾರೆ ಎಂದು ತಿಳಿಸಿದೆ. ಇದಕ್ಕೆ ಯುಕ್ರೇನ್​ ಸ್ಪಂದಿಸಿದೆಯೇ ಹೊರತು ರಷ್ಯಾ ಸಮ್ಮತಿ ಸೂಚಿಸಿಲ್ಲ.

ಎರಡನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ ಎರಡೂ ದೇಶಗಳು, ತಮ್ಮ ವಶದಲ್ಲಿರುವ ಖೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸಮ್ಮತಿ ಸೂಚಿಸಿವೆ. ಒಪ್ಪಂದದಡಿಯಲ್ಲಿ, ಮುಂದಿನ ವಾರದೊಳಗೆ ರಷ್ಯಾದ ಮಾಸ್ಕೋ, ಕೈವ್‌ಗೆ ಸುಮಾರು 6,000 ಯುಕ್ರೇನಿಯನ್ ಸೈನಿಕರ ಮೃತದೇಹಗಳನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ರಷ್ಯಾದ ಮುಖ್ಯ ಸಮಾಲೋಚಕರ ಪ್ರಕಾರ, "ಎಲ್ಲಾ ಅನಾರೋಗ್ಯ ಪೀಡಿತ ಮತ್ತು ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡ ಹಾಗೂ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಖೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಎರಡೂ ಕಡೆಯಿಂದ ಒಪ್ಪಿಗೆ ನೀಡಲಾಗಿದೆ" ಎಂದಿದ್ದಾರೆ.

"ಮೊದಲನೆಯದಾಗಿ, ನಾವು ಏಕಪಕ್ಷೀಯವಾಗಿ ಉರುಳಿಬಿದ್ದ ಯುಕ್ರೇನಿಯನ್ ಸೈನಿಕರು ಮತ್ತು ಅಧಿಕಾರಿಗಳ 6,000 ಶವಗಳನ್ನು ಅವರ ಕಡೆಯವರಿಗೆ ಹಸ್ತಾಂತರಿಸುತ್ತೇವೆ. ಸಾಧ್ಯವಾದವರನ್ನು ಗುರುತಿಸಿದ್ದೇವೆ. ಡಿಎನ್‌ಎ ಪರೀಕ್ಷೆಗಳನ್ನೂ ನಡೆಸಿದ್ದೇವೆ ಮತ್ತು ಅವರಲ್ಲಿ ಬಹುತೇಕರು ಯಾರೆಂಬುದನ್ನು ಸಹ ಕಂಡುಕೊಂಡಿದ್ದೇವೆ. ಮುಂದಿನ ವಾರ, ಮೃತದೇಹಗಳನ್ನು ಯುಕ್ರೇನಿಯನ್ ಕಡೆಯವರಿಗೆ ಹಸ್ತಾಂತರಿಸುತ್ತೇವೆ" ಎಂದು ಮೆಡಿನ್ಸ್ಕಿಹೇಳಿದ್ದಾರೆ,(ಏಜೆನ್ಸೀಸ್).