ಬಿಡದಿ: ಬೆಂಗಳೂರಿನ ಕಲ್ಮಶವನ್ನು ಹೊತ್ತು ಬಿಡದಿ ಭಾಗದಲ್ಲಿ ಹರಿಯುತ್ತಿದ್ದ ವೃಷಭಾವತಿ ನದಿ, ಲಾಕ್ಡೌನ್ ಪರಿಣಾಮದಿಂದ ಮೂಲಸ್ವರೂಪ ಪಡೆದುಕೊಳ್ಳುತ್ತಿದೆ.
ರಾಜಧಾನಿಯ ವಿವಿಧ ಬಡಾವಣೆಗಳ ಬಹುಪಾಲು ಪ್ರದೇಶಗಳ ಕೊಳಚೆ ನೀರು ವೃಷಭಾವತಿ ನದಿಯ ಮೂಲಕ ಬಿಡದಿಯ ಶ್ಯಾನುಮಂಗಲ, ತಾಳಗುಪ್ಪೆ, ಚಿನ್ನೇಗೌಡನದೊಡ್ಡಿ, ಅಂಚೀಪುರ, ಗೊಲ್ಲರಪಾಳ್ಯ, ಬೋಚೋಹಳ್ಳಿ, ಪರಸನಪಾಳ್ಯ, ಶೇಷಗಿರಿಹಳ್ಳಿ ಗ್ರಾಮಗಳ ಅಂಚಿನಲ್ಲಿ ಹರಿದು ಬೈರಮಂಗಲ ಕೆರೆಯನ್ನು ಸೇರುತ್ತಿತ್ತು. 383 ಚದರ ಕಿ.ಮೀ. ನದಿಪಾತ್ರ ಹೊಂದಿರುವ ವೃಷಭಾವತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 93 ವಾರ್ಡ್ ಗಳು, 16 ವಿಧಾನಸಭೆ ಕ್ಷೇತ್ರಗಳು ಹಾಗೂ 5 ಲೋಕಸಭೆ ಕ್ಷೇತ್ರಗಳನ್ನು ಹಾದುಹೋಗುತ್ತದೆ.
ನದಿಯನ್ನು ಮೋರಿಯಾಗಿ ಪರಿವರ್ತಿಸಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಅದರ ಶುದ್ಧೀಕರಣಕ್ಕೆ ಕೈಹಾಕಬೇಕು ಎಂದು ಸರ್ಕಾರವಷ್ಟೇ ಅಲ್ಲದೆ ಅನೇಕ ಸಂಘ- ಸಂಸ್ಥೆಗಳು ನಿರಂತರ ಕಾರ್ಯ, ಪರಿಸರವಾದಿಗಳು ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಲೇ ಇದ್ದವು. ಆದರೂ ಈ ನದಿಯನ್ನು ಶುದ್ಧೀಕರಿಸುವ ಆಶಯ ಪೂರ್ತಿಯಾಗಿ ಸಾಕಾರಗೊಂಡಿರಲಿಲ್ಲ.
ಆದರೆ, ಕರೊನಾ ಸೋಂಕು ಹರಡುವ ಭೀತಿಯಿಂದ ಘೊಷಿಸಲಾದ ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ 15 ದಿನದಿಂದ ಕಾರ್ಖಾನೆಗಳು ಮುಚ್ಚಿವೆ. ಅಲ್ಲದೆ, ಲಕ್ಷಾಂತರ ಜನರು ತಮ್ಮ ಊರುಗಳತ್ತ ಮುಖ ಮಾಡಿರುವುದರಿಂದ ವೃಷಭಾವತಿ ನದಿಯಲ್ಲಿ ತ್ಯಾಜ್ಯ ಕಡಿಮೆಯಾಗಿದೆ. ನೀರು ತಿಳಿಯಾಗಿ ಹರಿಯುತ್ತಿದೆ. ಈ ಹಿಂದೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ವಾತಾವರಣವಿತ್ತು. ಇದೀಗ ಸ್ವಲ್ಪಮಟ್ಟಿಗೆ ಬದಲಾಗಿರುವ ಪರಿಸರದಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಾರ್ಖಾನೆಗಳೇ ಮಾಲಿನ್ಯಕ್ಕೆ ಕಾರಣ
ಸಾಮಾನ್ಯವಾಗಿ ಕಾರ್ಖಾನೆಗಳಿಂದ ಹರಿದುಬರುವ ನೀರಿನಿಂದ ನದಿಗಳು ಕಲುಷಿತವಾಗುತ್ತವೆ ಎಂಬ ನಂಬಿಕೆ ಇದೆ. ಆದರೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರ ಪ್ರಕಾರ, ಬಹುತೇಕ ಎಲ್ಲ ಕಾರ್ಖಾನೆಗಳಿಂದಲೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಗೆ ಅನುಗುಣವಾಗಿ ನೀರನ್ನು ಸಂಸ್ಕರಿಸಿ ನದಿಗೆ ಬಿಡಲಾಗುತ್ತಿದೆ. ಎನ್ಜಿಟಿ ಆದೇಶದ ನಂತರ ಕೆಲ ಅಪಾರ್ಟ್ವೆುಂಟ್ಗಳೂ ಎಸ್ಟಿಪಿ ಅಳವಡಿಸಿಕೊಂಡು ಶುದ್ಧೀಕರಿಸಿದ ನೀರನ್ನು ಹೊರಗೆ ಬಿಡುತ್ತಿವೆ ಅಥವಾ ಗಾರ್ಡನ್ ಸೇರಿ ಮತ್ತಿತರ ಕಾರ್ಯಕ್ಕೆ ಮರುಬಳಕೆ ಮಾಡುತ್ತಿವೆ. ಆದರೆ, ವೈಯಕ್ತಿಕ ಮನೆಗಳು, ಕೊಳಚೆ ಪ್ರದೇಶಗಳು, ವಾಹನಗಳ ಸರ್ವೀಸ್ ಸ್ಟೇಷನ್ಗಳಿಂದ ನೀರು ನೇರವಾಗಿ ಕಾಲುವೆ ಮೂಲಕ ನದಿ ಸೇರುತ್ತಿತ್ತು. ಹಾಗೆಯೇ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬೆಂಗಳೂರು ತೊರೆದಿರುವುದೂ ನದಿ ನೀರು ತಿಳಿಯಾಗಲು ಕಾರಣವಿರಬಹುದು ಎಂದು ತಿಳಿಸಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಕಾರ್ಖಾನೆಗಳೇ ಮಾಲಿನ್ಯಕ್ಕೆ ಕಾರಣ. ಅನೇಕ ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಿದ್ದರೂ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಾರೆ.
ವೃಷಭಾವತಿ ನದಿಯಲ್ಲಿ ಬರುವ ತ್ಯಾಜ್ಯ ಮತ್ತು ಕಲ್ಮಶದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಬದುಕು ಸಾಗಿಸುವುದು ಹೇಗೆಂಬ ಪ್ರಶ್ನೆ ಜನರನ್ನು ಕಾಡುತ್ತಿತ್ತು. ಕಳೆದ ಮೂರ್ನಾಲ್ಕು ದಿನದಿಂದ ಯಾವುದೇ ಕಲ್ಮಶ ಇಲ್ಲದೆ ತಿಳಿಯಾದ ನೀರು ಹರಿಯುತ್ತಿದ್ದು, ಸ್ವಲ್ಪ ಸಮಾಧಾನ ತಂದಿದೆ. | ಸಿ.ಎನ್. ನಾಗರಾಜು ಚಿನ್ನೇಗೌಡನದೊಡ್ಡಿ ಗ್ರಾಮಸ್ಥ
ರಾಜು ಪಾದರಹಳ್ಳಿ