ಬೆಂಗಳೂರು: ಕರ್ನಾಟಕದ ಗ್ರಾಮೀಣ ಭಾಗ ಎದುರಿಸುತ್ತಿರುವ ಕುಡಿಯವ ನೀರು ಹಾಗೂ ನೈರ್ಮಲ್ಯದ ಸಮಸ್ಯೆಗೆ ಪರಿಹಾರ ಒದಗಿಸುವ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸುಸ್ಥಿರತೆಯ ಶೃಂಗಸಭೆಯನ್ನು ಅ.29 ರಂದು ಏರ್ಪಡಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಂದ ಈ ಶೃಂಗಸಭೆ ಆಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ‘ಗ್ರಾಮೀಣ ಭಾಗದಲ್ಲಿ ನೀರಿನ ನೈರ್ಮಲ್ಯತೆಯ ಭವಿಷ್ಯ ನಿರ್ಮಾಣಕ್ಕೆ ನಾವಿನ್ಯತೆ ಬಳಕೆ’ ಶೀರ್ಷಿಕೆಯಡಿ ಈ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ತ್ಯಾಜ್ಯ ನಿರ್ವಹಣೆ, ನೀರಿನ ಮಾಲಿನ್ಯವನ್ನು ಪತ್ತೆಹಚ್ಚುವುದು (ರಾಸಾಯನಿಕ, ಜೈವಿಕ ಇತ್ಯಾದಿ), ಕೈಗಾರಿಕಾ ಅಭಿವೃದ್ಧಿಗೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಮೌಲ್ಯಮಾಪನ ಮಾಡುವುದು ಸಭೆಯ ಮುಖ್ಯ ಉದ್ದೇಶಗಳಾಗಿವೆ. ಜಲ ಮಾಲಿನ್ಯ, ಜಲಸಂಪನ್ಮೂಲ ನಿರ್ವಹಣೆ, ನೀರಿನ ಗುಣಮಟ್ಟ ನಿರ್ವಹಣೆ, ನೀರಿನ ಶುದ್ಧೀಕರಣ ಘಟಕಗಳು ಮತ್ತು ನೀರಿನ ಉತ್ಪಾದನೆಯ ಕುರಿತು ಪೈಲಟ್ ಆಧಾರದ ಮೇಲೆ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. ಈ ನಾವೀನ್ಯತೆ ಯೋಜನೆಗಳಿಗೆ ಧನಸಹಾಯ, ನೈರ್ಮಲ್ಯ ಸೌಲಭ್ಯಗಳನ್ನು ಸುಧಾರಿಸಿ ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡಲು, ತ್ಯಾಜ್ಯವನ್ನು ಸಂಸ್ಕರಿಸಲು ಪರಿಸರ ಸ್ನೇಹಿ ನೈರ್ಮಲ್ಯ ತಂತ್ರಜ್ಞಾನಗಳನ್ನು ಅನ್ವೇಷಿಸಲಾಗುತ್ತದೆ. ಈ ಶೃಂಗಸಭೆಯ ಮೂಲಕ ಸರ್ಕಾರ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯಸಾಧ್ಯವಾದ ಪರಿಹಾರವನ್ನು ಅನ್ವೇಷಿಸಲಿದೆ ಎಂದು ಹೇಳಿದ್ದಾರೆ.
ಈ ಸಭೆಯಲ್ಲಿ ಪ್ರತಿಷ್ಠಿತ ಉದ್ಯಮದ ಮುಖಂಡರು, ಉದ್ಯಮಿಗಳು ಮತ್ತು ಸಂಶೋಧಕರನ್ನು ಒಗ್ಗೂಡಿಸಿ, ಅವರ ಆಲೋಚನೆ ಹಾಗೂ ಅಭಿಪ್ರಾಯಗಳ ವಿನಿಮಯವನ್ನು ಉತ್ತೇಜಿಸುವುದು ರಾಜ್ಯದ ಧ್ಯೇಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮೀಣ ಭಾಗದ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ವಿನೂತನ ಆಲೋಚನೆ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ತಮ್ಮ ಬಳಿ ನವೀನ ಆಲೋಚನೆ ಇರುವ ನವೋದ್ಯಮಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು.
ಶೃಂಗಸಭೆಯಲ್ಲಿ ತಮ್ಮ ಆಲೋಚನೆಗಳನ್ನು ಪ್ರಸ್ತುತ ಪಡಿಸುವ ಸ್ಪರ್ಧಾಳುಗಳಿಗೆ ವಿಶೇಷ ಅಧಿವೇಶನ ನಡೆಸಲಾಗುವುದು. ಅಲ್ಲಿ ಆಯ್ದ ನವೋದ್ಯಮ ವಿಜೇತರು ಕನಿಷ್ಠ 25 ಲಕ್ಷ ರೂ.ಗಳನ್ನು ಬಹುಮಾನ ಪಡೆಯಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.