ರಾಜ್ಯ ಸರ್ಕಾರಿ ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಪದಾಧಿಕಾರಿಗಳು ಶಿವಮೊಗ್ಗ ಜಿಪಂ ಸಿಇಒ ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು. ಕೆ.ಎಸ್.ಮಾಲಾ, ಲಕ್ಷ್ಮೀ, ಗೀತಾ, ಯಶೋದಾ, ಸುರೇಶ್, ವಿನೋದ್, ಗಣೇಶ್, ಲೋಕೇಶ್, ರಾಕೇಶ್, ಪ್ರತಾಪ್, ರಾಜಣ್ಣ, ಚನ್ನನಾಯಕ್, ಇಬ್ರಾಹಿಂ, ವೀರೇಶ್, ರೇಣುಕೇಶ್ ಇದ್ದರು.  
ನ್ಯೂಸ್

ಭಾಗ್ಯವತಿ ಸಾವಿನ ಪ್ರಕರಣದ ಕ್ರಮಕ್ಕೆ ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರ ಆಗ್ರಹ

ಶಿವಮೊಗ್ಗ: ಕಲಬುರಗಿ ಜಿಲ್ಲೆಯ ಮಳಖೇಡ ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಮೇಲ್ವಿಚಾರಕಿ ಭಾಗ್ಯವತಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮೃತರ ಕುಟುಂಬಕ್ಕೆ ಸರ್ಕಾರದಿಂದ ಕನಿಷ್ಠ 25 ಲಕ್ಷ ರೂ. ಪರಿಹಾರ ಘೋಷಿಸಿ, ಕುಟುಂಬದ ಒಬ್ಬರಿಗೆ ಅನುಕಂಪ ಆಧಾರದಲ್ಲಿ ನೌಕರಿ ನೀಡಬೇಕು. ಜತೆಗೆ ಭಾಗ್ಯವತಿ ಸಾವಿಗೆ ಕಾರಣವಾಗಿರುವ ಪಿಡಿಒ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಂಥಪಾಲಕರಿಗೆ ಆರ್ಥಿಕ ಇಲಾಖೆಯಿಂದ ತಲಾ 12 ಸಾವಿರ ರೂ. ಹಾಗೂ ಜಿಲ್ಲಾ ಪಂಚಾಯಿತಿಯಿಂದ ಹೆಚ್ಚುವರಿ ವೇತನ ಪಾವತಿಸಲಾಗುತ್ತಿದೆ. ಆದರೆ ಕಳೆದ ಒಂದು ವರ್ಷದಿಂದ ಜಿಪಂಗಳಿಂದ ಹೆಚ್ಚುವರಿ ವೇತನ ಪಾವತಿ ಸ್ಥಗಿತಗೊಂಡಿದ್ದು, ಇದರಿಂದ ಗ್ರಂಥಪಾಲಕರ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ. ಹಾಗಾಗಿ ಒಂದೇ ಕಂತಿನಲ್ಲಿ ಕನಿಷ್ಠ ವೇತನ ನೀಡುವಂತೆ ಗ್ರಂಥಪಾಲಕರು ಜಿಪಂ ಸಿಇಒ ಎನ್.ಹೇಮಂತ್ ಹಾಗೂ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

ಅರಿವು ಕೇಂದ್ರ ಮೇಲ್ವಿಚಾರಕರಾದ ಕೆ.ಎಸ್.ಮಾಲಾ, ಲಕ್ಷ್ಮೀ, ಗೀತಾ, ಯಶೋದಾ, ಸುರೇಶ್, ವಿನೋದ್, ಗಣೇಶ್, ಲೋಕೇಶ್, ರಾಕೇಶ್, ಪ್ರತಾಪ್, ರಾಜಣ್ಣ, ಚನ್ನನಾಯಕ್, ಇಬ್ರಾಹಿಂ, ವೀರೇಶ್, ರೇಣುಕೇಶ್ ಮತ್ತಿತರರಿದ್ದರು.