ನ್ಯೂಸ್

ಆರ್​ಟಿಪಿಸಿಆರ್ ವಾಪಸ್ ಮುಂದಿನ ವಾರ ನಿರ್ಧಾರ; ಐಸಿಎಂಆರ್ ನಿಯಮ ಪಾಲನೆಗೆ ತೀರ್ಮಾನ

Webdesk - Ravikanth

ಬೆಂಗಳೂರು: ಗಡಿ ಪ್ರದೇಶದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ ಪರೀಕ್ಷೆ ಪ್ರಮಾಣ ಪತ್ರ ಕಡ್ಡಾಯ ಮಾಡಿ ಕಿರುಕುಳ ನೀಡಲಾಗುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ನಿಯಮವನ್ನು ಹಿಂಪಡೆಯುವ ಸಂಬಂಧ ಮುಂದಿನವಾರ ತೀರ್ವನಿಸಲಿದೆ. ಇನ್ನು ಆರ್​ಟಿಪಿಸಿಆರ್ ವಿಚಾರದಲ್ಲಿ ಕಂದಾಯ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ಪರೀಕ್ಷೆ ಹೆಸರಿನಲ್ಲಿ ಲೂಟಿ ದಂಧೆ ನಡೆಯುವುದಕ್ಕೆ ದಾರಿಯಾಗಿದೆ. ನಿಯಮಗಳನ್ನು ರೂಪಿಸಿದ್ದರೂ ಅದರ ಜಾರಿ ಪೊಲೀಸ್ ಇಲಾಖೆಗೆ ಸೇರಿದ್ದೆಂಬುದು ಆರೋಗ್ಯ ಇಲಾಖೆಯ ಅಭಿಪ್ರಾಯವಾಗಿದ್ದರೆ, ಆರೋಗ್ಯ, ಕಂದಾಯ ಇಲಾಖೆಗಳ ನಿಯಮ ಪ್ರಕಾರವೇ ಕಾರ್ಯ ನಿರ್ವಹಿಸಲಾಗುತ್ತಿದೆ ಎಂಬುದು ಪೊಲೀಸ್ ಇಲಾಖೆಯ ವಾದ. ಈ ಆರೋಪ, ಸ್ಪಷ್ಟನೆಯಿಂದಾಗಿ ಲೂಟಿಗೆ ಕಡಿವಾಣ ಹಾಕುವ ವಿಚಾರದಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ್ಯಾರು? ಎಂಬಂತಾಗಿದೆ. ಐಸಿಎಂಆರ್ ನಿಯಮಗಳ ಅನ್ವಯ ಹೆಚ್ಚು ಪರೀಕ್ಷೆ ಆರೋಗ್ಯಕ್ಕೂ ಹಾನಿಕರವಾಗಿದ್ದರೂ ಆರೋಗ್ಯ ಇಲಾಖೆ ಆಗಲಿ, ಪೊಲೀಸ್ ಇಲಾಖೆಯೇ ಆಗಲಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಸರ್ಕಾರ, ಹಿರಿಯ ಅಧಿಕಾರಿಗಳ ಗಮನಕ್ಕೂ ಬಾರದಂತೆ ಕೆಳ ಹಂತದಲ್ಲಿಯೇ ನಡೆಯುತ್ತಿರುವ ಲೂಟಿಯನ್ನು ತಡೆಯು ವವರೇ ಇಲ್ಲದಂತಾಗಿದೆ. ಹೀಗಾಗಿ ಐಸಿಎಂಆರ್ ನಿಯಮ ಪಾಲಿಸುವ ನಿರ್ಧಾರವಾಗುವ ಸಾಧ್ಯತೆಯಿದೆ.

ಸರ್ಕಾರ ತಜ್ಞರ ಅಭಿಪ್ರಾಯ ಪರಿಗಣಿಸಿ ಬಹುತೇಕ ನಿಯಮಗಳಿಗೆ ವಿನಾಯಿತಿ ನೀಡಿದೆ. ಆದರೆ ಗಡಿ ಚೆಕ್​ಪೋಸ್ಟ್​ಗಳಲ್ಲಿ ನಡೆಯುತ್ತಿರುವ ಕಿರುಕುಳವನ್ನು ಮಾತ್ರ ತಪ್ಪಿಸುವ ಕಡೆ ಗಮನ ಹರಿಸುತ್ತಿಲ್ಲ ಎಂಬ ದೂರು ಸರ್ವೆಸಾಮಾನ್ಯವಾಗಿದೆ. ಬೆಳಗಾವಿ ಗಡಿ ಚೆಕ್​ಪೋಸ್ಟ್​ನಲ್ಲಿ ನಡೆಯುತ್ತಿರುವ ಲೂಟಿ ಕುರಿತು ಗೃಹ ಸಚಿವರು, ಆರೋಗ್ಯ ಸಚಿವರು, ಪ್ರಕೃತಿ ವಿಕೋಪ ನಿಯಂತ್ರಣ ಸಮಿತಿಯ ಉಪಾಧ್ಯಕ್ಷರು ಆಗಿರುವ ಕಂದಾಯ ಸಚಿವರಿಗೇ ಸಂಪೂರ್ಣ ಮಾಹಿತಿ ಇದ್ದಂತಿಲ್ಲ. ಆದ್ದರಿಂದಲೇ ಸರ್ಕಾರ ಕೆಳಹಂತದಲ್ಲಿ ನಡೆದಿರುವ ಲೂಟಿಯನ್ನು ತಡೆಯುವ ಪ್ರಯತ್ನ ಮಾಡಿಲ್ಲ ಎಂಬುದು ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ.

ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯ ಹಾಗೂ ನೆರೆಯ ರಾಜ್ಯಗಳಲ್ಲಿರುವ ನಿಯಮಗಳನ್ನು ಪಡೆದು ಕಾರ್ಯ ನಿರ್ವಹಿಸಿದ್ದರೆ ಈ ರೀತಿಯ ತೊಂದರೆ ಆಗುತ್ತಿರಲಿಲ್ಲವೆಂದು ಹೇಳಲಾಗುತ್ತಿದೆ. ನಿಯಮಗಳ ಜಾರಿ ಪೊಲೀಸ್ ಇಲಾಖೆಗೆ ಸೇರಿದ್ದರೂ ಇತರ ಇಲಾಖೆಗಳಿಗೂ ಕೆಲವೊಂದು ಜವಾಬ್ದಾರಿಗಳಿವೆ. ಅವುಗಳ ಪ್ರಕಾರ ಸರ್ಕಾರ ನಡೆಯಬೇಕಾಗುತ್ತದೆ. ತಾಳಮೇಳವಿಲ್ಲದಂತೆ ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲವೆಂಬುದು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದು ಕಿರುಕುಳ ಅನುಭವಿಸಿದ ಪ್ರಯಾಣಿಕರ ಅಭಿಪ್ರಾಯವಾಗಿದೆ.

ಸಿಎಂ ಸಭೆ ತೀರ್ಮಾನ: ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಜಾರಿಗೊಳಿಸಲಾಗಿರುವ ಕಡ್ಡಾಯ ಟೆಸ್ಟ್ ನಿಯಮವನ್ನು ಹಿಂದಕ್ಕೆ ಪಡೆಯಬೇಕೇ ಅಥವಾ ಬೇಡವೇ ಎಂಬುದನ್ನು ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯ ಮುಂದಿನ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ. ಕೇರಳ ಹಾಗೂ ಮಹಾರಾಷ್ಟದಲ್ಲಿ ಇನ್ನೂ ಸೋಂಕಿನ ಪ್ರಕರಣಗಳು ಇರುವುದರಿಂದ ಕಾದು ನೋಡಲು ನಿರ್ಧರಿಸಿದೆ.

ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಿರುವುದನ್ನು ಹಿಂದಕ್ಕೆ ಪಡೆಯಬೇಕೇ- ಬೇಡವೇ ಎಂಬುದನ್ನು ಮುಂದಿನ ವಾರ ನಿರ್ಧರಿಸುತ್ತೇವೆ. ಪ್ರಯಾಣಿಕರಿಗೆ ತೊಂದರೆ ಕೊಡುವುದನ್ನು ಸರ್ಕಾರ ಸಹಿಸುವುದಿಲ್ಲ. | ಆರ್. ಅಶೋಕ್ ಕಂದಾಯ ಸಚಿವ ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಬರುವವರಿಗೆ ಪೊಲೀಸರು ಕಿರುಕುಳ ನೀಡುತ್ತಿರುವ ಬಗ್ಗೆ ಅಲ್ಲಿನ ಐಜಿಪಿ ಜತೆ ಮಾತನಾಡುತ್ತೇನೆ. ಯಾವುದೇ ಪೊಲೀಸರು ಲೂಟಿ ಮಾಡುತ್ತಿರುವ ಬಗ್ಗೆ ದೂರು ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸುತ್ತೇವೆ. | ಆರಗ ಜ್ಞಾನೇಂದ್ರ ಗೃಹ ಸಚಿವ

ಅವೈಜ್ಞಾನಿಕ ಕೋವಿಡ್ ಪರೀಕ್ಷಾ ನಿಯಮ

ರಾಜ್ಯ ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದಾಗಿ ಮಹಾರಾಷ್ಟ್ರ, ಗೋವಾ ಮತ್ತು ಕೇರಳ ಗಡಿಯಲ್ಲಿ ಆರ್​ಟಿಪಿಸಿಆರ್ ಕಿರಿಕಿರಿ ಕಂಡು ಬಂದಿದ್ದು, ಮೂರೂ ರಾಜ್ಯಗಳ ಪ್ರಯಾಣಿಕರು ಹೈರಾಣಾಗಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡಿನ ಗಡಿಗಳಿಗೊಂದು ನ್ಯಾಯ, ಮಹಾರಾಷ್ಟ್ರ, ಕೇರಳ, ಗೋವಾ ಗಡಿಗಳಿಗೊಂದು ನ್ಯಾಯ ಎಂಬಂತಾಗಿದೆ. ಬೆಂಗಳೂರಿನಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮೂಲದವರೇ ಶೇ.40 ಜನರು ವಾಸವಾಗಿದ್ದಾರೆ. ನಿತ್ಯವೂ ಈ ಎರಡು ರಾಜ್ಯಗಳಿಂದ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಆ ಗಡಿಗಳಲ್ಲಿ ಆರ್​ಟಿಪಿಸಿಆರ್ ಕಡ್ಡಾಯ ಮಾಡದೆ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಮತ್ತೊಂದೆಡೆ ಐಸಿಎಂಆರ್ ಪ್ರಕಾರ 2 ಡೋಸ್ ಲಸಿಕೆ ಪಡೆದವರು ಆರ್​ಟಿಪಿಸಿಆರ್ ಮಾಡಿಸಬೇಕಾಗಿಲ್ಲ ಎಂದು ಹೇಳುತ್ತಿದ್ದರೂ ಸರ್ಕಾರ ಮಾತ್ರ 3 ರಾಜ್ಯಗಳ ಗಡಿಯಲ್ಲಿ ಆರ್​ಟಿಪಿಸಿಆರ್ ಕಡ್ಡಾಯ ಮಾಡಿದೆ.

ಪೊಲೀಸರಿಗೂ ಕಿರಿಕಿರಿ: ಆರ್​ಟಿಪಿಸಿಆರ್ ತಪಾಸಣೆಗಾಗಿ ಪೊಲೀಸರು ವಿವಿಧ ಚೆಕ್​ಪೋಸ್ಟ್​ಗಳಲ್ಲಿ ನಿಯೋಜನೆಗೊಂಡಿದ್ದರಿಂದ ಕಳ್ಳತನ, ದರೋಡೆ, ಕಾನೂನು ಸುವ್ಯವಸ್ಥೆ, ಗಣ್ಯರ ಪ್ರವಾಸ, ಕೊಲೆ ಪ್ರಕರಣಗಳ ತನಿಖೆ ಸೇರಿ ನಿತ್ಯವೂ ಪೊಲೀಸ್ ಇಲಾಖೆಯಿಂದ ನಡೆಯಬೇಕಾದ ಕೆಲಸ ಕಾರ್ಯಗಳು ಕುಂಟುತ್ತ ಸಾಗಿವೆ. ಇತ್ತೀಚೆಗೆ ಕಂದಾಯ ಇಲಾಖೆಯಲ್ಲಿ ‘ಗ್ರಾಮ ಒನ್’ಎಂಬ ಸೇವೆಯನ್ನೂ ಜಾರಿಗೆ ತರಲಾಗಿದೆ. ಆದರೆ ಹಳ್ಳಿಗಳಲ್ಲಿ ಕೆಲಸ ಮಾಡಬೇಕಾದ ಕಂದಾಯ ಇಲಾಖೆ ಸಿಬ್ಬಂದಿ ಚೆಕ್​ಪೋಸ್ಟ್​ಗಳಲ್ಲಿ ಠಿಕಾಣಿ ಹೂಡಿರುವುದರಿಂದ ‘ಗ್ರಾಮ್ ಒನ್’ ಯೋಜನೆಗೂ ಹಿನ್ನೆಡೆಯಾಗುತ್ತಿದೆ. 500ಕ್ಕೂ ಅಧಿಕ ಸೇವೆಗಳನ್ನು ಕಂದಾಯ ಇಲಾಖೆ ನೀಡಬೇಕಾಗಿದ್ದರೂ, ಸಿಬ್ಬಂದಿ ಈಗ ಕೇವಲ ಗಡಿ ಕಾಯುವ ಕೆಲಸದಲ್ಲಿ ತೊಡಗಿದ್ದಾರೆ.

ಆರ್ಥಿಕತೆ ಮೇಲೂ ಹೊಡೆತ: ಬೀದರ, ಕಲಬುರಗಿ ಜನತೆ ಹೈದರಾಬಾದ್ ಮಾರುಕಟ್ಟೆ ಅವಲಂಬಿಸಿದ್ದರೆ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜನತೆ ಮಹಾರಾಷ್ಟ್ರದ ಮಾರುಕಟ್ಟೆಯನ್ನೂ ಅವಲಂಬಿಸಿದ್ದಾರೆ. ಬೆಳಗಾವಿ ಮತ್ತು ಉತ್ತರ ಕನ್ನಡ, ಗೋವಾದ ನಡುವೆಯೂ ಸಾಕಷ್ಟು ಆರ್ಥಿಕ ವ್ಯವಹಾರ ನಡೆಯುತ್ತವೆ, ಆದರೆ, ಆರ್​ಟಿಪಿಸಿಆರ್ ಕಡ್ಡಾಯ ಮಾಡಿದ್ದರಿಂದ ಕಿತ್ತೂರ ಕರ್ನಾಟಕದ ವಿವಿಧ ಜಿಲ್ಲೆಗಳ ಮೇಲೆ ಆರ್ಥಿಕತೆಯ ದೊಡ್ಡ ಹೊಡೆತ ಬೀಳುತ್ತಿದೆ. ಸರ್ಕಾರ ಆರ್​ಟಿಪಿಸಿಆರ್ ತಪಾಸಣೆ ಕಡ್ಡಾಯ ನಿಯಮ ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕು ಎಂದು ವರ್ತಕರು ಒತ್ತಾಯಿಸಿದ್ದಾರೆ.

ಪಿಎಚ್​ಸಿಗಳು ಖಾಲಿ ಖಾಲಿ: ಆರೋಗ್ಯ ಇಲಾಖೆಯ ವತಿಯಿಂದ ಲಸಿಕೆ ಹಾಕುವುದು, ವಿವಿಧ ರೋಗಗಳ ತಪಾಸಣೆ, ಹೆರಿಗೆ, ಕೋವಿಡ್​ಗೆ ಮುಂಜಾಗ್ರತೆ ಕುರಿತು ತೆಗೆದುಕೊಂಡು ಸಾಕಷ್ಟು ಕೆಲಸಗಳನ್ನು ಮಾಡಬೇಕಿದ್ದರೂ, ಆರೋಗ್ಯ ಇಲಾಖೆಯ ಅನೇಕ ಸಿಬ್ಬಂದಿ ಗಡಿ ಕಾಯುವ ಕೆಲಸದಲ್ಲಿ ತೊಡಗಿರುವುದರಿಂದ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್​ಸಿಗಳು) ಖಾಲಿ ಹೊಡೆಯುತ್ತಿವೆ. ಹಳ್ಳಿ ಜನತೆ ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ವಣವಾಗಿದೆ. ಅನಗತ್ಯ ಕೆಲಸದ ಒತ್ತಡದಿಂದ ಆರೋಗ್ಯ ಇಲಾಖೆ ಸಿಬ್ಬಂದಿಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.