ನ್ಯೂಸ್

ಸಬಲೀಕರಣಕ್ಕೆ ಸೋಪಾನ ಆರ್​​ಟಿಐ

ದೇಶದ ಪ್ರತಿಯೊಬ್ಬ ಪ್ರಜೆಗೂ ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳ ಮಾಹಿತಿ ಪಡೆದುಕೊಳ್ಳಲು ಕಲ್ಪಿಸಲಾಗಿರುವ ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ ಎರಡು ದಶಕಗಳು ಪೂರ್ಣಗೊಂಡಿವೆ. ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2005ರ ಅಕ್ಟೋಬರ್ 12ರಂದು ಜಾರಿಗೊಳಿಸಿದ ಈ ಕಾಯ್ದೆಯ ಸದ್ಬಳಕೆ-ದುರ್ಬಳಕೆ, ವ್ಯಾಪ್ತಿ-ವಿಸ್ತರಣೆ ಕುರಿತು ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಮತ್ತು ಎಸ್. ರಾಜಶೇಖರ್ ಅವರು ವಿಜಯವಾಣಿ ಸಂವಾದದಲ್ಲಿ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ಹಣದ ಸದ್ಬಳಕೆಯ ಉದ್ದೇಶದಿಂದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಯುನೆಸ್ಕೋ ಪಟ್ಟಿಯಲ್ಲಿರುವ 132 ರಾಷ್ಟ್ರಗಳಲ್ಲಿ ಜಾರಿಯಾಗಿರುವ ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಭಾರತದಲ್ಲಿ 2005ರಲ್ಲಿ ಜಾರಿಗೆ ಬಂತು. ಅಕ್ಟೋಬರ್ 12ಕ್ಕೆ 20 ವರ್ಷಗಳನ್ನು ಪೂರೈಸಿರುವ ಆರ್​ಟಿಐ ಕಾಯ್ದೆಯ ಜಾರಿ ಹಿಂದೆ ಕಿಸಾನ್ ಶಕ್ತಿ ಸಂಘಟನೆಯ ಮುಖ್ಯಸ್ಥೆ ಅರುಣಾ ರಾಯ್ ಅವರ ಹೋರಾಟದ ಹಿನ್ನೆಲೆ ಇದೆ.

ನಾಗರಿಕ ಸಬಲೀಕರಣ, ಸರಳ ಮತ್ತು ಪಾರದರ್ಶಕ ಆಡಳಿತ, ಅಧಿಕಾರಿ-ಸಿಬ್ಬಂದಿಯ ಉತ್ತರದಾಯಿತ್ವ, ಭ್ರಷ್ಟಾಚಾರ ನಿಯಂತ್ರಣ ಈ ಪ್ರಮುಖ ನಾಲ್ಕು ಅಂಶಗಳನ್ನು ಇರಿಸಿಕೊಂಡು ಆರ್​ಟಿಐ ಕಾಯ್ದೆಯನ್ನು ರೂಪಿಸಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಈ ಕಾಯ್ದೆಯನ್ವಯ ಕೇಂದ್ರ ಮಾಹಿತಿ ಹಕ್ಕು ಆಯೋಗ ಹಾಗೂ ರಾಜ್ಯದಲ್ಲಿ ಪ್ರತ್ಯೇಕ ಮಾಹಿತಿ ಹಕ್ಕು ಆಯೋಗ ಕೆಲಸ ಮಾಡುತ್ತಿವೆ. ರಾಜ್ಯ ಮಾಹಿತಿ ಹಕ್ಕು ಆಯೋಗವು ಬೆಂಗಳೂರಿನಲ್ಲಿ ಪ್ರಧಾನ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಕಚೇರಿಗಳನ್ನು ಹೊಂದಿದೆ.

ರಾಜ್ಯದ 80 ಸಾವಿರ ಪ್ರಾಧಿಕಾರಗಳು ಆರ್​ಟಿಐ ಅಧೀನಕ್ಕೊಳಪಟ್ಟಿದ್ದು, ಸಾರ್ವಜನಿಕ ಸಂಪರ್ಕಾಧಿಕಾರಿ ಮೂಲಕ 10 ರೂಪಾಯಿ ಶುಲ್ಕದೊಂದಿಗೆ ಯಾರು ಬೇಕಾದರೂ ಸಾರ್ವಜನಿಕ ಹಿತಾಸಕ್ತಿಯನ್ನಿರಿಸಿಕೊಂಡು ಅರ್ಜಿ ಸಲ್ಲಿಸಬಹುದು. ನಿಯಮದ ಪ್ರಕಾರ 30 ದಿನದಲ್ಲಿ ಮಾಹಿತಿಯನ್ನು ನೀಡಬೇಕಾಗಿದೆ. ಶೇಕಡ 80 ಪ್ರಕರಣಗಳಲ್ಲಿ ಮಾಹಿತಿ ದೊರೆಯುತ್ತಿದೆ.

ವ್ಯಾಪ್ತಿ ವಿಸ್ತಾರವಾಗಬೇಕು: ಇಪ್ಪತ್ತು ವರ್ಷದ ಹಿಂದೆ ಜಾರಿಯಾಗಿರುವ ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಪಟ್ಟಂತೆ ಆಯೋಗದ ವ್ಯಾಪ್ತಿ ವಿಸ್ತರಣೆಯ ಅಗತ್ಯವಿದೆ. ಖಾಸಗಿ ಕ್ಷೇತ್ರವನ್ನು ಆಯೋಗದ ಅಥವಾ ಕಾಯ್ದೆಯ ವ್ಯಾಪ್ತಿಗೆ ತರುವುದು ಕಷ್ಟಸಾಧ್ಯವಾದರೂ, ಸರ್ಕಾರಿ ಸೌಲಭ್ಯ ಮತ್ತು ಸಂಪನ್ಮೂಲವನ್ನು ಬಳಸಿಕೊಂಡು ನಡೆಯುತ್ತಿರುವ ಸಂಘ-ಸಂಸ್ಥೆಗಳು, ಸಹಕಾರಿ ಬ್ಯಾಂಕುಗಳು ಮತ್ತಿತರ ಸಂಸ್ಥೆಗಳನ್ನು ಕಾಯ್ದೆಯ ವ್ಯಾಪ್ತಿಗೆ ತಂದು ಸಾರ್ವಜನಿಕರಿಗೆ ಮಾಹಿತಿ ದೊರೆಯುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು. ಸಾರ್ವಜನಿಕರಿಗೆ ಆರ್​ಟಿಐ ಬಗ್ಗೆ ಅರಿವು ಮೂಡಿಸಲು ವಾರ್ತಾ ಮತ್ತು ಪ್ರಚಾರ ಇಲಾಖೆ ಮೂಲಕ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಗಳನ್ನು ರೂಪಿಸಬೇಕು. ಆಯೋಗದ ಕಾರ್ಯಚಟುವಟಿಕೆಯ ವೇಗ ಹೆಚ್ಚಿಸಲು ಸಿಬ್ಬಂದಿ ಹೆಚ್ಚಿಸುವುದು, ತಂತ್ರಜ್ಞಾನದ ಅಭಿವೃದ್ಧಿ, ಅರ್ಜಿ ಶುಲ್ಕ ಮತ್ತು ಮಾಹಿತಿ ಪುಟದ ಶುಲ್ಕವನ್ನು ಹೆಚ್ಚಿಸುವ ಅಗತ್ಯವಿದ್ದು ಈ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ.

ಜನರ ಮನೆಬಾಗಿಲಿಗೆ ಆಯೋಗ

ಯಾವುದೇ ಹೊಸ ಕಾಯ್ದೆ ಜಾರಿಯಾದಾಗ ಅದನ್ನು ಅನುಷ್ಠಾನಕ್ಕೆ ತರಬೇಕಾದ ಅಧಿಕಾರಿಗಳಿಗೆ ತರಬೇತಿ ಅವಶ್ಯ. ಅಂತೆಯೇ ರಾಜ್ಯ ಮಾಹಿತಿ ಆಯೋಗವನ್ನು ಪರಿಣಾಮಕಾರಿಯಾಗಿಸಲು ಈಗಾಗಲೇ ಚಾಲನೆ ನೀಡಲಾಗಿದೆ. ಜಿಲ್ಲಾಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದೆ. 10-12 ಜಿಲ್ಲೆಗಳಲ್ಲಿ ಕಾರ್ಯಾಗಾರಗಳು ಯಶಸ್ವಿಯಾಗಿವೆ. ವಿವಿಧ ಪ್ರಕರಣಗಳಲ್ಲಿನ ಕೋರ್ಟ್ ಆದೇಶ, ಮಾಹಿತಿ ಆಯೋಗದ ನೀತಿ-ನಿಯಮ, ರಾಜ್ಯ ಮತ್ತು ಕೇಂದ್ರ ಮಾಹಿತಿ ಆಯೋಗದ ತೀರ್ಪಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಜನಸಾಮಾನ್ಯರನ್ನು ಭೇಟಿಯಾಗಿ ಅವರ ಕುಂದು-ಕೊರತೆಗಳನ್ನು ಆಲಿಸಿ ಅವರಿಗೆ ಬೇಕಾದ ಮಾಹಿತಿಯನ್ನು ಒದಗಿಸುವುದು ಹಾಗೂ ಮುಂದಿನ ದಿನಗಳಲ್ಲಿ ಜನರ ಮನೆಬಾಗಿಲಿಗೆ ಆಯೋಗವನ್ನು ಕೊಂಡೊಯ್ಯುವ ಗುರಿ ಹೊಂದಲಾಗಿದೆ.

ದುರ್ಬಳಕೆಗೆ ಕಡಿವಾಣ ಅಗತ್ಯ

ಜನಹಿತದ ದೃಷ್ಟಿಯಿಂದ ಯಾವುದೇ ಹೊಸ ಕಾಯ್ದೆ ಜಾರಿಯಾದಾಗ ಅದರ ದುರ್ಬಳಕೆ ಕೂಡ ಸಾಮಾನ್ಯ. ಸಾರ್ವಜನಿಕ ಹಿತಾಸಕ್ತಿಗಾಗಿ ಬಳಕೆಯಾಗಬೇಕಾದ ಕಾಯ್ದೆಯನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವವರು ಇದ್ದೇ ಇರುತ್ತಾರೆ. ಗುಜರಾತಿನಲ್ಲಿ ಒಬ್ಬನೇ ವ್ಯಕ್ತಿ 7 ಸಾವಿರ ಅರ್ಜಿ ಸಲ್ಲಿಸಿದ್ದ! ಕರ್ನಾಟಕದಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗೆ ಒಂದೇ ವಿಷಯದ ಅರ್ಜಿ ಸಲ್ಲಿಸಿದ್ದ. ಇಂತಹ ಪ್ರಕರಣಗಳನ್ನು ಆಯೋಗ ಸೂಕ್ಷ್ಮವಾಗಿ ಗಮನಿಸುತ್ತದೆ. ಒಂದು ದೃಷ್ಟಿಯಲ್ಲಿ ಬ್ಲಾಕ್​ವೆುೕಲರ್​ಗಳನ್ನು ಹುಟ್ಟು ಹಾಕುವುದೇ ಅಧಿಕಾರಿಗಳು. ಅಧಿಕಾರಿಗಳು ನಿಗದಿತ ಸಮಯದಲ್ಲಿ ಮಾಹಿತಿಯನ್ನು ಒದಗಿಸಿದರೆ ಬ್ಲಾಕ್​ವೆುೕಲ್ ಪ್ರಶ್ನೆ ಉದ್ಭವಿಸುವುದಿಲ್ಲ. ಮಾಹಿತಿ ಲಭ್ಯವಿಲ್ಲ, ಕಡತ ಕಣ್ಮರೆಯಾಗಿದೆ ಎಂಬ ಕಾರಣ ನೀಡಿದರೆ ಸಂಬಂಧಪಟ್ಟ ಅಧಿಕಾರಿ ಅಥವಾ ನೌಕರನನ್ನು ಹೊಣೆಯಾಗಿಸಿ ಎಫ್​ಐಆರ್ ದಾಖಲಿಸಿದ ನಿದರ್ಶನಗಳಿವೆ. ಮಾಹಿತಿ ನೀಡದ ಅಧಿಕಾರಿಗಳಿಗೆ ಈವರೆಗೆ 10 ಕೋಟಿ ರೂ. ದಂಡ ಸಹ ವಿಧಿಸಲಾಗಿದೆ.

ನಿಯಮಗಳ ಪ್ರದರ್ಶನ ಕಡ್ಡಾಯ

ಸಾರ್ವಜನಿಕ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಆರ್​ಟಿಐ ಕಾಯ್ದೆಯ ಅಧೀನದಲ್ಲಿರುವುದರಿಂದ, 4(1)ಎ, 4(1)ಬಿ ಅನ್ವಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಾಯ್ದೆಯ ನಿಯಮಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಕಾಯ್ದೆ ಜಾರಿಯಾಗಿ 20 ವರ್ಷಗಳೇ ಕಳೆದಿದ್ದರೂ ಈವರೆಗೆ ಶೇ.70 ಕಚೇರಿಗಳಲ್ಲಿ ಮಾತ್ರ ಪ್ರದರ್ಶನ ಫಲಕಗಳಿವೆ. ಕಾಯ್ದೆಯ ಬಗ್ಗೆ ಸಾಕಷ್ಟು ಅಧಿಕಾರಿಗಳಲ್ಲಿ ಇನ್ನೂ ನಿರಾಸಕ್ತಿ ಮತ್ತು ನಿರ್ಲಕ್ಷ ್ಯ ಇರುವುದರಿಂದ ಕಾಯ್ದೆಯ ಸದ್ಬಳಕೆಗಿಂತ ದುರ್ಬಳಕೆ ಹೆಚ್ಚಾಗಿದೆ. ಕರ್ನಾಟಕದಲ್ಲಿ 41 ಸಾವಿರ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಸಕಾಲದಲ್ಲಿ ಮಾಹಿತಿ ದೊರೆಯದಿದ್ದರೆ ಅರ್ಜಿದಾರನ ಉದ್ದೇಶ ಈಡೇರುವುದಿಲ್ಲ. ಮುಂದೆ ಆ ಮಾಹಿತಿ ಪ್ರಯೋಜನಕ್ಕೂ ಬರುವುದಿಲ್ಲ. ಅರ್ಜಿದಾರರು ಮಾಹಿತಿಗೆ ಕಾರಣ ಹೇಳುವ ಅಗತ್ಯವಿಲ್ಲ. ಮಾಹಿತಿಯ ಪ್ರಮಾಣ ಹೆಚ್ಚಾಗಿದ್ದರೆ; ಕ್ರೋಡೀಕರಿಸಿದ ಮಾಹಿತಿಯನ್ನಾದರೂ ಕಾಲಾವಧಿಯಲ್ಲಿ ನೀಡಬೇಕು. ಈ ಎಲ್ಲ ಪ್ರಕ್ರಿಯೆ ಅನುಷ್ಠಾನದ ಮೊದಲ ಭಾಗವಾಗಿ ನಿಯಮಗಳ ಪ್ರದರ್ಶನ ಫಲಕ ಅಗತ್ಯವಿದ್ದು, ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆಯಲಾಗಿದೆ.

ಅರ್ಜಿಗಳು ನನೆಗುದಿಗೆ

ವಿವಿಧ ಮಾಹಿತಿಗಾಗಿ ಆರ್​ಟಿಐ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳು ಮತ್ತು ಮೇಲ್ಮನವಿಗಳು ಸಮರ್ಪಕವಾಗಿ ಇತ್ಯರ್ಥವಾಗುತ್ತಿಲ್ಲ. ಇಂಥ ಅರ್ಜಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕಳವಳದ ವಿಚಾರ. ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಮಾಹಿತಿ ಆಯೋಗಗಳ ಮುಂದೆ ಇತ್ಯರ್ಥವಾಗದ ಅರ್ಜಿಗಳು/ಮೇಲ್ಮನವಿಗಳು 2019ರಲ್ಲಿ 2.86 ಲಕ್ಷ, 2023ರಲ್ಲಿ 3.88 ಲಕ್ಷ ಇದ್ದರೆ 2025ರಲ್ಲಿ ಈ ಸಂಖ್ಯೆ ಮತ್ತೂ ಹೆಚ್ಚಳಗೊಂಡು 4.13 ಲಕ್ಷಕ್ಕೆ ತಲುಪಿದೆ. ಹೆಚ್ಚು ಅರ್ಜಿಗಳು ಬಾಕಿ ಇರುವ ಮೊದಲ ಮೂರು ಸ್ಥಾನದಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿವೆ. 2024ರ ಜುಲೈನಿಂದ 2025ರ ಜೂನ್ 30ರವರೆಗೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 54,869 ಅರ್ಜಿಗಳು ದಾಖಲಾಗಿದ್ದು ಈ ಪೈಕಿ 38,410 ದೂರುಗಳು ಇತ್ಯರ್ಥಗೊಂಡಿವೆ. ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ 27,748 ಅರ್ಜಿಗಳು ದಾಖಲಾಗಿದ್ದು, 22,336 ಇತ್ಯರ್ಥಗೊಂಡಿವೆ. ಕರ್ನಾಟಕದಲ್ಲಿ 27,490 ಅರ್ಜಿಗಳು ದಾಖಲಾಗಿದ್ದರೆ ಈ ಪೈಕಿ 26,802 ಇತ್ಯರ್ಥಗೊಂಡಿವೆ. ದೇಶದಲ್ಲಿ ಒಟ್ಟು 2.41 ಲಕ್ಷ ಅರ್ಜಿಗಳು ಬಂದಿದ್ದು, 1.82 ಲಕ್ಷ ದೂರುಗಳು ಇತ್ಯರ್ಥಗೊಂಡಿವೆ.

ಆಗಬೇಕಾದ ಸುಧಾರಣೆಗಳು

  • ಜನಸಾಮಾನ್ಯರು ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು, ಅರಿವು ಹೆಚ್ಚಿಸಲು ಸೂಕ್ತ ರಚನಾತ್ಮಕ ಹೆಜ್ಜೆಗಳನ್ನು ಇರಿಸಬೇಕು.
  • ಸಮಗ್ರ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಮಾಹಿತಿ ಹಕ್ಕು ಆಯೋಗದ ವೆಬ್​ಸೈಟ್​ನಲ್ಲಿ ಪ್ರತಿವರ್ಷ ತಪ್ಪದೇ ಪ್ರಕಟಿಸಬೇಕು.
  • ಸರ್ಕಾರಿ ಕಚೇರಿಗಳಲ್ಲಿ ಆರ್​ಟಿಐ ಕಾಯ್ದೆ ಕುರಿತಾದ ಬೋರ್ಡ್ (ಫಲಕ)ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಶ್ರೀಸಾಮಾನ್ಯರಿಗೆ ಸಂಬಂಧಪಟ್ಟ ಸಿಬ್ಬಂದಿ ಸೂಕ್ತ ಮಾಹಹಿತಿಯನ್ನು ಒದಗಿಸಬೇಕು.
  • ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವವರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
  • ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಗೊಳಿಸಬೇಕು. ಇದಕ್ಕಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯನ್ನು ನಿವಾರಿಸಬೇಕು.

ಆರ್​ಟಿಐ ಕಾರ್ಯಕರ್ತರ ಹತ್ಯೆ

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಹಲವು ಮಾಫಿಯಾಗಳಲ್ಲಿ ನಡುಕ ಸೃಷ್ಟಿಯಾಗಿದೆ. ರಿಯಲ್ ಎಸ್ಟೇಟ್, ಮರಳು ಮಾಫಿಯಾ ಸೇರಿದಂತೆ ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿರುವವರ ಪಾಲಿಗೆ ಮಾಹಿತಿ ಹಕ್ಕು ಕಾರ್ಯಕರ್ತರು ಶತ್ರುಗಳಂತೆ ಕಾಣುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಆರ್​ಟಿಐ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆ ಮತ್ತು ಹತ್ಯೆ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಕಾಮನ್​ವೆಲ್ತ್ ಮಾಹಿತಿ ಹಕ್ಕುಗಳ ಕಾರ್ಯಕ್ರಮ (ಸಿಎಚ್​ಆರ್​ಐ) ಪ್ರಕಾರ, ಕಾಯ್ದೆ ಜಾರಿಯಾದಾಗಿನಿಂದ (2005) ಇದುವರೆಗೆ ಕನಿಷ್ಠ 107 ಮಾಹಿತಿ ಹಕ್ಕು ಕಾರ್ಯಕರ್ತರು ಹತ್ಯೆಯಾಗಿದ್ದಾರೆ ಮತ್ತು ಬೆದರಿಕೆ, ಒತ್ತಡಗಳಿಂದ ಏಳು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲಭೂತ ಹಕ್ಕಾಗಿರುವ ಆರ್​ಟಿಐಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಸದ್ಬಳಕೆ ಮಾಡಿಕೊಂಡು ಸಮಾಜ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು. ಅರ್ಜಿದಾರನಿಗೆ ಬೇಗ ಮಾಹಿತಿ ನೀಡುವುದು ಸಂಬಂಧಪಟ್ಟ ಅಧಿಕಾರಿಯ ಕರ್ತವ್ಯ.

-| ಎಸ್.ರಾಜಶೇಖರ್ ಮಾಹಿತಿ ಆಯುಕ್ತ

ದೇಶದ ಅಭಿವೃದ್ಧಿ ಕುಂಠಿತಕ್ಕೆ ಭ್ರಷ್ಟಾಚಾರ ಪ್ರಮುಖ ಕಾರಣ. ಭ್ರಷ್ಟಾಚಾರ ನಿಮೂಲನೆಯಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಆರ್​ಟಿಐ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಆರ್​ಟಿಐ ಕಾಯ್ದೆ ಬಗೆಗಿನ ಮಾಹಿತಿ ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೇರ್ಪಡೆ ಮಾಡುವ ಚಿಂತನೆ ಇದೆ.

-| ರುದ್ರಣ್ಣ ಹರ್ತಿಕೋಟೆ ಮಾಹಿತಿ ಆಯುಕ್ತ

ಬಾಕಿ ಇರುವ ಅರ್ಜಿ/ಮೇಲ್ಮನವಿ (2025ರ ಜೂನ್ 30ರವರೆಗೆ)

ಮಹಾರಾಷ್ಟ್ರ 95,340

ಕರ್ನಾಟಕ 47,825

ತಮಿಳುನಾಡು 41,059

ದೇಶದಲ್ಲಿ ಬಾಕಿ ಇರುವ ಒಟ್ಟು ಅರ್ಜಿಗಳು 4.13 ಲಕ್ಷ