| ದೇವರಾಜ್ ಎಲ್. ಬೆಂಗಳೂರು
ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದ ಶಿಕ್ಷಣ ಹಕ್ಕು ಕಾಯ್ದೆ(ಆರ್ಟಿಇ) ಖಾಸಗಿ ಶಾಲೆಗಳಿಗೆ ವರದಾನವಾಗಿದ್ದು, ಸರ್ಕಾರದ ಕೋಟ್ಯಂತರ ರೂ. ಪೋಲಾಗುತ್ತಿದೆ.
ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಗಾಳಿ ತೂರಿ ಮಕ್ಕಳ ಶುಲ್ಕ ಮರುಪಾವತಿ ಹೆಸರಿನಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿವೆ. ಸರ್ಕಾರದಿಂದ ನಾಗರಿಕ ಸೌಲಭ್ಯ ನಿವೇಶನ(ಸಿಎ ಸೈಟ್) ಪಡೆದುಕೊಂಡ ಮೇಲೆ ಶುಲ್ಕ ಮರುಪಾವತಿ ಸೌಲಭ್ಯ ನೀಡುವಂತಿಲ್ಲವೆಂದು ಸರ್ಕಾರದ ನಿಯಮ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಸರ್ಕಾರಕ್ಕೆ ಸಡ್ಡು ಹೊಡೆದು ಖಾಸಗಿ ಶಾಲೆಗಳು ಮರುಪಾವತಿ ಪಡೆಯುವಲ್ಲಿ ಯಶಸ್ವಿಯಾಗಿವೆ. ಇದೂ ಸಾಲದೆಂಬಂತೆ, ಆರ್ಟಿಇ ಮಕ್ಕಳ ಪ್ರವೇಶದ ನೆಪದಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೂ ಈವರೆಗೆ ಬ್ರೇಕ್ ಬಿದ್ದಿಲ್ಲ.
ಅಧಿಕಾರಿಗಳ ಮೃದು ಧೋರಣೆ: ಸರ್ಕಾರದ ಕೋಟ್ಯಂತರ ಹಣ ಖಾಸಗಿ ಶಾಲೆಗಳ ಪಾಲಾಗಲು ಶಿಕ್ಷಣ ಇಲಾಖೆಯಲ್ಲಿರುವ ಅಧಿಕಾರಿಗಳ ಮೃದು ಧೋರಣೆ ಮತ್ತು ಹೊಂದಾಣಿಕೆಯೇ ಪ್ರಮುಖ ಕಾರಣವಾಗಿದೆ. ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಭೂಮಿ, ಕಟ್ಟಡ, ಸಾಧನ ಸಾಮಗ್ರಿ ಪಡೆದು ಜತೆಗೆ ಆರ್ಟಿಇ ಶುಲ್ಕದ ಮರುಪಾವತಿಯನ್ನು ಪಡೆಯುತ್ತಿರುವ ಶಾಲೆ ಬಗ್ಗೆ ಮಹಾಲೇಖಪಾಲಕ ವರದಿಯಲ್ಲಿ ಆಕ್ಷೆಪಣೆ ವ್ಯಕ್ತವಾಗಿದೆ.
ಮಂಡ್ಯದ ಜಿಲ್ಲೆಯಲ್ಲಿ ಈ ರೀತಿ 12 ಶಾಲೆಗಳು ಅಕ್ರಮ ಮಾರ್ಗದಲ್ಲಿ ಮರುಪಾವತಿ ಪಡೆದುಕೊಂಡಿದ್ದು, ಅದನ್ನು ವಸೂಲಿ ಮಾಡುವಂತೆಯೂ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ಒಂದೊಮ್ಮೆ ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆಗೆ ಒಳಪಡಿಸಿದರೆ ಕೋಟ್ಯಂತರ ಹಣವನ್ನು ಖಾಸಗಿ ಶಾಲೆಗಳು ಸರ್ಕಾರಕ್ಕೆ ಹಿಂತಿರುಗಿಸಬೇಕಾದ ಸನ್ನಿವೇಶ ಎದುರಾಗಲಿದೆ.
ಮರುಪಾವತಿಯ ಹಕ್ಕಿಲ್ಲ: ಆರ್ಟಿಇ ಸೆಕ್ಷನ್ 12(2) ನಿಯಮದಲ್ಲಿ "ಶಾಲೆಯು, ಉಚಿತವಾಗಿರಲಿ ಅಥವಾ ರಿಯಾಯಿತಿ ದರದಲ್ಲಿ ಯಾವುದೇ ಭೂಮಿ, ಕಟ್ಟಡ, ಸಾಧನ ಸಾಮಗ್ರಿ ಅಥವಾ ಇತರ ಸೌಲಭ್ಯಗಳನ್ನು ಸ್ವೀಕರಿಸುವ ಕಾರಣದಿಂದಾಗಿ ನಿರ್ದಿಷ್ಟ ಸಂಖ್ಯೆಯ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲು ಈಗಾಗಲೇ ಬದ್ಧವಾಗಿರುವಲ್ಲಿ, ಅಂಥ ಶಾಲೆಯ ಹಾಗೆ ತಾನು ಬದ್ಧರಾಗಿರುವಷ್ಟರ ಮಟ್ಟಿಗೆ ವೆಚ್ಚವನ್ನು ಮರಳಿ ಪಡೆಯಲು ಹಕ್ಕುಳ್ಳದ್ದಾಗಿರತಕ್ಕದ್ದಲ್ಲ' ಎಂದು ಸ್ಪಷ್ಟವಾಗಿ ತಿಳಿಸಿದೆ. ಆರ್ಟಿಇ ಪ್ರಾರಂಭವಾದ ವರ್ಷದಿಂದ ಹೆಚ್ಚುವರಿಯಾಗಿ ಪಾವತಿಯಾಗಿರುವ ಶುಲ್ಕ ಮರುಪಾವತಿಯ ಮೊಬಲಗನ್ನು ಸರ್ಕಾರಕ್ಕೆ ಜಮಾ ಮಾಡುವ ಬಗ್ಗೆಯೂ ಕ್ರಮ ವಹಿಸಬೇಕು. ಶಾಲಾವಾರು ಮಾಹಿತಿಯನ್ನು ಕಚೇರಿಗೆ ಸಲ್ಲಿಸಲು ಸೂಚಿಸಿದೆ. ಇಂತಹ ಯಾವುದೇ ಶಾಲೆಗಳು ನಿಮ್ಮ ಕ್ಷೇತ್ರದಲ್ಲಿ ಇಲ್ಲದಿದ್ದಲ್ಲಿ ಶೂನ್ಯ ವರದಿ ನೀಡಬೇಕೆಂದು ಶಿಕ್ಷಣ ಇಲಾಖೆ ಆದೇಶ ಮಾಡಿತ್ತು.
ಆದರೆ, ಕರೊನಾ ಬಂದ ಕಾರಣ ಖಾಸಗಿ ಶಾಲೆಗಳು ಸಂಕಷ್ಟದಲ್ಲಿ ಇರುವುದರಿಂದ ದಾಖಲೆಗಳು ಸಲ್ಲಿಸದ ಮತ್ತು ಶುಲ್ಕ ಮರುಪಾವತಿ ಪ್ರಕ್ರಿಯೆಯಲ್ಲಿ ವಿಳಂಬವಾಗದಂತೆ ಎಚ್ಚರವಹಿಸಬೇಕೆಂದು ಮರು ಆದೇಶ ಮಾಡಿದೆ. ಇದರಿಂದಾಗಿ ಮತ್ತೆ ಸುಲಭವಾಗಿ ಖಾಸಗಿ ಶಾಲೆಗಳು ಮರುಪಾವತಿ ಪಡೆದುಕೊಳ್ಳುತ್ತಿವೆ.
ಮರುಪಾವತಿ ಎಷ್ಟು?: ರಾಜ್ಯ ಸರ್ಕಾರ ಖಾಸಗಿ ಶಾಲೆಯಲ್ಲಿ ಆರ್ಟಿಇ ವ್ಯಾಸಂಗ ಮಾಡುತ್ತಿರುವ ಪ್ರತಿ ಮಗುವಿಗೆ 5ರಿಂದ 8 ಸಾವಿರ ರೂ. ಮತ್ತು 11ರಿಂದ 16 ಸಾವಿರ ರೂ. ನಿಗದಿ ಮಾಡಿದೆ. ರಾಜ್ಯದಲ್ಲಿ 2012-13ನೇ ಸಾಲಿನಿಂದ 2020-21ನೇ ಸಾಲಿನವರೆಗೂ 1,802.73 ಕೋಟಿ ರೂ.ಗಳನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. 11 ಸಾವಿರ ಶಾಲೆಗಳು ಆರ್ಟಿಇ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುತ್ತಿವೆ.
ಕೇಂದ್ರ ಸರ್ಕಾರಕ್ಕೆ ಮಾಹಿತಿ ಇಲ್ಲ: ಕೇಂದ್ರ ಸರ್ಕಾರ ಇತ್ತೀಚಿಗೆ ನಡೆಸಿದ ಯೋಜನಾ ಅನುಮತಿ ಮಂಡಳಿ(ಪಿಎಬಿ) ಸಭೆಯಲ್ಲಿ ರಾಜ್ಯ ಸರ್ಕಾರದ ಬಳಿ ಆರ್ಟಿಇ ಶುಲ್ಕ ಮರುಪಾವತಿ ವಸೂಲಿ ಕುರಿತು ಮಾಹಿತಿ ಕೇಳಿದ್ದು, ರಾಜ್ಯ ಸರ್ಕಾರ ಮಾಹಿತಿ ನೀಡಲಾಗುವುದು ಎಂದು ಹೇಳಿ ಕೈ ತೊಳೆದುಕೊಂಡಿದೆಯೇ ಹೊರತು ಈ ಬಗ್ಗೆ ಯಾವುದೇ ಮಾಹಿತಿಯನ್ನು ರಾಜ್ಯ ಶಿಕ್ಷಣ ಇಲಾಖೆ ನೀಡಿಲ್ಲ.
ಖಾಸಗಿ ಶಾಲೆಗಳ ವಾದವೇನು?: ಕೇಂದ್ರ ಸರ್ಕಾರದ ಆರ್ಟಿಇ ಸೆಕ್ಷನ್ 12.1(ಸಿ) ತಿದ್ದುಪಡಿಗೆ ಆಯಾ ರಾಜ್ಯಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರ ಇದರ ತಿದ್ದುಪಡಿ ಮಾಡಿದೆ. ಈ ಹಿನ್ನೆಲೆಯಲ್ಲಿ ನಾವು ಶುಲ್ಕ ಮರುಪಾವತಿ ಪಡೆಯಲು ಅರ್ಹರೆಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್)ದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದ್ದಾರೆ.
ಸಿಎಜಿ ವರದಿಯಲ್ಲಿ ಆರ್ಟಿಇ ಶುಲ್ಕ ಮರುಪಾವತಿ ಕುರಿತು ಆಕ್ಷೇಪಣೆ ಎತ್ತಿರುವುದು ನಿಜ. ಆದರೆ, ಇದಕ್ಕೆ ಸಮಜಾಯಿಸಿ ಅನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಅದನ್ನು ಬಿಟ್ಟು ಸರ್ಕಾರದಿಂದ ಭೂಮಿ ಪಡೆದಿರುವವರೆಲ್ಲ ಮರುಪಾವತಿ ಪಡೆಯಲು ಅರ್ಹರಲ್ಲ ಎಂಬುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.