ನವದೆಹಲಿ: ತಬ್ಲಿಘಿ-ಎ- ಜಮಾತ್ ಸಭೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ, ಈ ಸಮಾವೇಶದಿಂದಾಗಿ ಸೋಂಕು ಬೇಗನೇ ದುಪ್ಪಟ್ಟಾಗಿದೆ ಎಂದಿದ್ದಾರೆ.
ಆದರೆ ಎಲ್ಲಾ ಮುಸ್ಲಿಂ ಸಮುದಾಯವನ್ನು ತಬ್ಲಿಘಿ- ಎ- ಜಮಾತ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ. ಅನೇಕ ಮುಸ್ಲಿಮರು ಸರ್ಕಾರಕ್ಕೆ ನೆರವಾಗುವ ರೀತಿಯಲ್ಲಿಯೂ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ವೀಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ವೈದ್ಯ, ನಮ್ಮ ಸಂಘಟನೆಯ (ಆರ್‌ಎಸ್‌ಎಸ್) ಆಡಳಿತ ಮಂಡಳಿಯ ಸಭೆಯಾದ ಪ್ರಾತಿನಿಧಿಕ್ ಸಭಾವನ್ನೇ ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಗೊಳಿಸಿದೆವು. ಇದನ್ನು ತಬ್ಲಿಘಿ -ಎ-ಜಮಾತ್ ಕೂಡ ಮಾಡಬೇಕಿತ್ತು. ಇದನ್ನು ಮುಸ್ಲಿಂ ಸಮುದಾಯದವರೇ ಒಪ್ಪಿದ್ದಾರೆ ಹಾಗೂ ತಬ್ಲಿಘಿ ಸಮಾವೇಶವನ್ನು ಟೀಕಿಸಿದ್ದಾರೆ ಎಂದರು.
ಇಡೀ ದೇಶವು ಲಾಕ್‌ಡೌನ್‌ನಲ್ಲಿ ಇರುವಾಗ ತಬ್ಲಿಘಿಗಳಿಗೆ ಧಾರ್ಮಿಕ ಸಮಾವೇಶ ನಡೆಸುವುದು ಏಕೆ ಮುಖ್ಯವಾಗಿತ್ತು? ಇದನ್ನು ನೋಡಿದರೆ ಅವರ ಉದ್ದೇಶ ಸ್ಪಷ್ಟವಾಗುತ್ತದೆ. ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ದೇಶಾದ್ಯಂತ ಒತ್ತಾಯಕೇಳಿ ಬರುತ್ತಿದೆ. ದೇಶದ ಬಹುತೇಕ ಮುಸಲ್ಮಾನ್ ಸಹೋದರರೇ ಖುದ್ದಾಗಿ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಮನ್‌ಮೋಹನ್ ವೈದ್ಯ ಹೇಳಿದರು.
ದೇಶದಲ್ಲಿ ಪ್ರತಿ 4.1 ದಿನಗಳಲ್ಲಿ ಕೋವಿಡ್-19 ಪಕ್ರರಣಗಳು ದುಪ್ಪಟ್ಟಾಗುತ್ತಿವೆ. ತಬ್ಲಿಘಿ ಧಾರ್ಮಿಕ ಸಭೆ ನಡೆದಿರದಿದ್ದರೆ ಪ್ರತಿ 7.4 ದಿನಗಳಿಗೊಮ್ಮೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು ಎಂಬುದನ್ನು ಖುದ್ದು ಆರೋಗ್ಯ ಇಲಾಖೆಯೇ ಸ್ಪಷ್ಟಪಡಿಸಿದೆ. ಈ ಅಂಕಿ ಸಂಖ್ಯೆಗಳೇ ಅವರ ಅಪರಾಧವನ್ನು ಒತ್ತಿ ಹೇಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. (ಏಜೆನ್ಸೀಸ್)