ತುಮಕೂರು : ವಿಶ್ವಮಾನವತಾ ಸಮಾಜದ ಸೃಷ್ಟಿ ಇಡೀ ವಿಶ್ವದಲ್ಲಿ ಕಾಣುವಂತಾಗಬೇಕು. ಅದಕ್ಕೆ ಪೂರಕವಾಗಿ ಸಂಘ ಕಾರ್ಯನಿರ್ವಹಿಸಬೇಕು ಎಂದು ಆರ್‌ಎಸ್‌ಎಸ್ ಸರ ಸಂಘಚಾಲಕ ಮೋಹನ್ ಭಾಗವತ್ ಹೇಳಿದರು.
ನಗರದ ಕೋತಿತೋಪಿನ ಆರ್‌ಎಸ್‌ಸ್ ಜಿಲ್ಲಾ ಕಾರ್ಯಾಲಯ ‘ಸಾಧನಾ’ದ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಗುರುವಾರ ಆಯೋಜಿಸಿದ್ದ ಬೌದ್ಧಿಕ್ ವರ್ಗದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸುಸ್ಥಿರ ಸಮಾಜದ ಸರ್ವಾಂಗೀಣ ಉನ್ನತಿಗಾಗಿ ಸಂಘದಲ್ಲಿ ಜೋಡಿಸಿಕೊಂಡವರು ಶ್ರಮಿಸಬೇಕು.
ಪರಸ್ಪರ ಸುಖ-ದುಃಖದಲ್ಲಿ ಸಮವಾಗಿ ಭಾಗಿಯಾಗಬೇಕು. ನಮ್ಮ ಮನಸ್ಸಿನಲ್ಲಿ ಸ್ವಾರ್ಥದ ಲವಲೇಶವೂ ಇರಬಾರದು. ಸಂಪೂರ್ಣ ಹಿಂದು ಸಮಾಜದ ಸಂಘಟನೆ ನಮ್ಮ ಕಾಯಕ, ಹಿಂದೂ ಸಮಾಜದ ಏಳಿಗೆಯೇ ನಮ್ಮ ಉದ್ದೇಶ ಎಂದರು. ಅಂತಃಕರಣ ಶುದ್ಧಿ: ಶುದ್ಧತೆ, ಆತ್ಮೀಯ ವ್ಯವಹಾರ, ಪವಿತ್ರತೆ, ಪ್ರಾಮಾಣಿಕತೆ, ಸದ್ಭಾವನೆ, ನಿಸ್ಪೃಹತೆಯಿಂದ ಅಂತಃಕರಣ ಶುದ್ಧಿ ಉಂಟಾಗಬೇಕು. ಹೀಗಾದಾಗ ಸಂಘ ಕಾರ್ಯದ ವೇಗ ಹೆಚ್ಚುತ್ತೆ. ಕಾರ್ಯಾಲ ಯದಲ್ಲಿ ಇಂತಹ ಪರಿಶುದ್ಧ ವಾತಾವರಣ ಇರಬೇಕು.
ಸಂಘ ಅರಿಯಬೇಕಾದರೆ ಶಾಖೆಗೆ ಹೋಗಬೇಕು. ಶಾಖೆಯಿಂದ ಪಡೆದ ಸಂಸ್ಕಾರದಿಂದ ಸಂಘಜೀವನ ಹಾಗೂ ಸಾಮಾಜಿಕ ಜೀವನದಲ್ಲಿ ತೊಡಗಿ ಕೊಳ್ಳಲು ಸಾಧ್ಯವಾಗಲಿದೆ. ಕಾರ್ಯಾಲ ಯಕ್ಕೆ ಯಾರೇ ಬಂದರೂ ಅವರಿಗೆ ಸಂಘದ ಅನುಭವ ಉಂಟಾಗಬೇಕು ಎಂದು ಮೋಹನ್ ಭಾಗವತ್ ಹೇಳಿದರು.
ಸಂಘ ಕಾರ್ಯಕ್ಕೆ ಸಾಧನೆಯ ಅವಶ್ಯಕತೆ ಇದೆ. ಸಂಘಕಾರ್ಯ ಸಾಧನಗಳಿಲ್ಲದೆಯೇ ನಡೆದು ಬಂತು. ಡಾ.ಹೆಗ್ಡೇವಾರ್ ಜಿ ಅವರ ಬಳಿ ಯಾವುದೇ ಸಾಧನಗಳಿರಲಿಲ್ಲ. ಅಂದು ಸಂಘ ಕಟ್ಟುವ ಸಂದರ್ಭದಲ್ಲಿ ಪರಿಸ್ಥಿತಿ ವಿರುದ್ಧವಾಗಿತ್ತು, ಸಂಕಟಗಳು ಎದುರಾದವು. ಅಷ್ಟಾದರೂ ಸಂಘ ಕಾರ್ಯ ಬೆಳೆಯಿತು. ಸ್ಟೇಟಸ್ ಲವಿಂಗ್ ಆ್ಯಂಡ್ ಕಂಫರ್ಟ್ ಲವಿಂಗ್‌ಗೆ ಜೋತುಬೀಳುವುದು ಸಂಘದ ಕಾರ್ಯಕ್ಕೆ ಮಾರಕವಾಗಲಿದೆ. ಈ ಬಗ್ಗೆ ಎಚ್ಚರವಹಿಸುವುದು ಒಳಿತು ಎಂದರು.
ಒಟ್ಟಿನಲ್ಲಿ ಸಂಘಕಾರ್ಯದ ಸಾಧನೆಗಾಗಿ ಸಾಧನವಾಗಬೇಕು. ನಮ್ಮ ಸಾಧನೆಯಿಂದ ವ್ಯಕ್ತಿಗತ, ವೈಯಕ್ತಿಕ ನಿಷ್ಕಲ್ಮಶ ವ್ಯವಹಾರದಿಂದ ಸಮಾಜ ಪ್ರೇರಣೆ ಕೇಂದ್ರವಾಗಿ ಬೆಳೆಯಬೇಕು. ಇಲ್ಲಿರುವ ಮುಖಗಳನ್ನು ಕಂಡಾಗ ನನ್ನ ಅಂತರಂಗದಲ್ಲಿ ಭಾವ ಪೂರ್ಣವಾಗಿ ಸಂಘದ ಅನುಭವ ಉಂಟಾಗುತ್ತಿರುವುದು ಅನುಭವಕ್ಕೆ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಹ ಸರ್ಕಾರ್ಯವಾಹ ಮುಕುಂದ್, ಕ್ಷೇತ್ರೀಯ ಮಧ್ಯಪ್ರಚಾರಕ ಸುಧೀರ್, ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್, ಕ್ಷೇತ್ರೀಯ ಸಹಕಾರ್ಯವಾಹ ತಿಪ್ಪೇಸ್ವಾಮಿ, ಪ್ರಾಂತ ಸಂಘ ಚಾಲಕ ಎ.ವಿ.ಶೆಣೈ, ತುಮಕೂರು ವಿಭಾಗ ಸಂಘ ಚಾಲಕ ಡಾ.ಶಂಕರನಾಯಕ್, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್‌ಭಟ್, ಜಿಲ್ಲಾ ಸಂಘ ಚಾಲಕ ಎನ್.ಎಸ್.ನಾಗೇಂದ್ರ ಪ್ರಸಾದ್ ಇದ್ದರು.
ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ಭಾಗವತ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್‌ಭಾಗವತ್ ಗುರುವಾರ ಸಂಜೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ, ಶ್ರೀಸಿದ್ದಲಿಂಗಸ್ವಾಮೀಜಿ ಆಶೀರ್ವಾದ ಪಡೆದರು. ಆರ್‌ಎಸ್‌ಎಸ್ ಕಚೇರಿ ‘ಸಾಧನಾ’ದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಬೌದ್ಧಿಕ್ ವರ್ಗದಲ್ಲಿ ಭಾಗವಹಿಸಿದ ನಂತರ ಶ್ರೀಮಠಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತಿತರರು ಜತೆಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್‌ಭಗವತ್, ಸಿದ್ಧಗಂಗಾ ಮಠ ತನ್ನ ಸೇವೆಯ ಮೂಲಕ ದೇಶದಲ್ಲಿಯೇ ಮಾದರಿ ಎನಿಸಿದೆ, ಡಾ.ಶಿವಕುಮಾರಸ್ವಾಮೀಜಿ ಅವರ ತ್ರಿವಿಧ ದಾಸೋಹ ಇಂದಿಗೂ ಮಠದಲ್ಲಿ ಮುಂದುವರಿಯುತ್ತಿದೆ, ನಾಡಿನೆಲ್ಲಾ ಮಠಗಳಿಗೆ ಸಿದ್ಧಗಂಗಾ ಮಠ ಮಾರ್ಗದರ್ಶಕವಾಗಿದೆ ಎಂದರು.
ಡಾ.ಶಿವಕುಮಾರ ಸ್ವಾಮೀಜಿ ನಂತರವೂ ಶ್ರೀಮಠದಲ್ಲಿ ಸೇವೆ ಮುಂದುವರಿದಿರುವುದು ಸಂತೋಷ ಹಾಗೂ ಸಮಾಜದ ಶಕ್ತಿ ಎನ್ನಿಸಿದೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಠ, ಮಾನ್ಯಗಳ ಜತೆ ಸ್ವಾಮೀಜಿಗಳ ಆಶಿರ್ವಾದ, ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಿದೆ ಎಂದರು. ಹಿಂದೂ ಸಮಾಜದ ಧಾರ್ಮಿಕ ಸಂತರ ಮೇಲೆ ನಡೆಯುತ್ತಿರುವ ಜಾಗತಿಕ ಪಿತೂರಿ ತಡೆಯಲು ಸ್ವಾಮೀಜಿಗಳು ಮಾರ್ಗದರ್ಶನ ಮಾಡಬೇಕು, ಹಿಂದೂ ಧರ್ಮದ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಕಾಯಕದಲ್ಲಿ ಮಠಗಳು ಗಣನೀಯ ಸೇವೆ ಸಲ್ಲಿಸುತ್ತಿವೆ ಎಂದು ಶ್ಲಾಘಿಸಿದರು.ಜೆ.ಸಿ.ಮಾಧುಸ್ವಾಮಿ, ಕಲ್ಲಡ್ಕ ಪ್ರಭಾಕರ್ ಭಟ್, ಡಾ.ಪರಮೇಶ್ ಮತ್ತಿತರರು ಇದ್ದರು.
ಕಾರ್ಯಾಲಯ ದೇವಾಲಯ ಆಗಬೇಕು : ಸಾಧನಾ ಸಿದ್ಧಿಯಾಗಬೇಕಾದರೆ ಸಾಧಕನ ಸತ್ವ ಬಹಳ ಪ್ರಮುಖ. ನಮ್ಮ ಪರಿಶ್ರಮದಿಂದ ಈ ಕಾರ್ಯಾಲಯ ಕಟ್ಟಿದ್ದೇವೆ. ಸಂಘದ ಅನುಭವ ಸಿಗುವುದು ಶಾಖೆಯಲ್ಲಿ ಮಾತ್ರ ಪುಸ್ತಕ, ಭಾಷಣದಿಂದಲ್ಲ. ಸಮರಸ ದೃಷ್ಟಿಯಿಂದ ಸಂಘದ ಅನುಭವ ಆಗಬೇಕು. ಇದು ಕಾರ್ಯದ ಲಯ ಅಲ್ಲ. ಕಾರ್ಯದ ಆಲಯ ಆಗಬೇಕು. ಕಾರ್ಯದ ದೇವಾಲಯವಾಗಬೇಕು. ಉತ್ತಮ ಸಮಾಜಮುಖಿ ಕಾರ್ಯಗಳಿಂದ ಸಮಾಜದ ದರ್ಶನಾಲಯವಾಗಬೇಕು ಎಂದು ಮೋಹನ್ ಭಾಗವತ್ ನುಡಿದರು.