ನ್ಯೂಸ್

ಆರ್‌ಎಸ್‌ಎಸ್ ಬೆಳವಣಿಗೆ ಅಪಾಯ: ಬಿ.ಆರ್.ಪಾಟೀಲ | Restriction must

ಮೃತ್ಯುಂಜಯ ಕಪಗಲ್

ಬೆಂಗಳೂರು: ಹಿಂಸೆಯಲ್ಲಿ ನಂಬಿಕೆ, ದ್ವೇಷ ಮನೋಭಾವ ಬಿತ್ತುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಬೆಳವಣಿಗೆ ಅಪಾಯಕಾರಿಯಾಗಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಮಹಾತ್ಮಗಾಂಧಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಆರ್‌ಎಸ್‌ಎಸ್ ಕಾರ್ಯಕರ್ತ. ಜನಪರ ಚಿಂತಕರಾದ ಪನ್ಸಾರೆ, ಗೌರಿ ಲಂಕೇಶ್ ಅವರನ್ನು ಕಳೆದುಕೊಂಡೆವು ಎಂದರು.

ಹೂವಿನಂತಹ ಹೃದಯ ಬೇಕು

ಧರ್ಮ ರಕ್ಷಣೆ ಮಾಡುತ್ತೇವೆ, ಉತ್ತಮ ಸಂಸ್ಕಾರ ಕೊಡುತ್ತೇವೆ ಎಂದು ಹೇಳುವವರಿಗೆ ಲಾಠಿ ಏಕೆ ಬೇಕು ?. ಮಾನವೀಯ ಸಂಬಂಧಗಳನ್ನು ಬೆಳೆಸಲು, ಬೆಸೆಯಲು ಹೂವಿನಂತಹ ಹೃದಯಬೇಕು ಎಂದು ಹೇಳಿದರು.

ವೈಚಾರಿಕವಾಗಿ ಎದುರಿಸುವ ಸಾಮರ್ಥ್ಯವಿಲ್ಲದ ಸಂಘದವರು ಹೆದರಿಸಲು ಮುಂದಾಗಿದ್ದು, ಹಿಂಸೆ ಪ್ರಚೋದನೆಯಲ್ಲಿ ನಂಬಿಕೆಯಿಟ್ಟಿದ್ದಾರೆ. ಅಂತಹ ಸಂಘಟನೆ ದೇಶದಲ್ಲಿ ದೊಡ್ಡದಾಗಿ ಬೆಳೆದಿದ್ದು, ಅದರ ವಿರುದ್ಧ ಸಂಘಟನೆ ಬಲಪಡಿಸಿ ಗಟ್ಟಿಯಾಗಿ ನಾವು ಮಾತನಾಡುತ್ತೇವೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದು ಸಮಂಜಸವಾಗಿದೆ. ಅದಕ್ಕಾಗಿ ಅವರಿಗೆ ಬೆದರಿಕೆ ಹಾಕಿರುವುದು ಖಂಡನೀಯವಾಗಿದ್ದು, ಅವರ ಬೆಂಬಲಕ್ಕೆ ನಾವಿದ್ದೇವೆ ಎಂದರು.

ಹೈಕಮಾಂಡ್ ವಿವೇಚನೆಗೆ

ಸಚಿವ ಸ್ಥಾನದ ಆಕಾಂಕ್ಷಿಗಳಾದರೆ, ಬೇಡಿಕೆ ಮಂಡಿಸುವುದರಿಂದ ಯಾರೂ ಕೂಡ ಸಚಿವ ಸ್ಥಾನ ಪಡೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಹೇಳಿದರು.

ಸಚಿವ ಸ್ಥಾನ ಕೊಡುವುದು, ಬಿಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದು. ಹೋರಾಟದ ನೆಲೆಯಿಂದ ರಾಜಕೀಯಕ್ಕೆ ಬಂದವನು ನಾನು. ಸಚಿವ ಸ್ಥಾನಮಾನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಬಿ.ಆರ್.ಪಾಟೀಲ ಪ್ರತಿಕ್ರಿಯಿಸಿದರು.