ನ್ಯೂಸ್

ರಾಷ್ಟ್ರದೃಷ್ಟಾರ ಗುರೂಜಿ ಜಯಂತಿ ಇಂದು

‘ರಾಷ್ಟ್ರಧರ್ಮ ಪ್ರತಿಷ್ಠಾಯೈ ಕಟಿಬದ್ಧಾಃ ಸದಾ ವಯಂ’ ಎಂಬ ಧ್ಯೇಯಾ ದರ್ಶಗಳನ್ನೇ ಬದುಕಿನುದ್ದಕ್ಕೂ ಬಿತ್ತಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ವಿತೀಯ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ರಾಷ್ಟ್ರದೃಷ್ಟಾರ ಆದರ್ಶ ಋಷಿ. 1906 ಫೆಬ್ರವರಿ 19ರಂದು ಮಹಾರಾಷ್ಟ್ರದ ಸಂಪ್ರದಾಯಸ್ಥ ಜ್ಞಾನ ಕುಲೀನ ಮನೆತನದಲ್ಲಿ ಜನಿಸಿ ವಿಜ್ಞಾನದ ಜೊತೆಗೆ ಅಧ್ಯಾತ್ಮವನ್ನು, ಪದವಿಯ ಜೊತೆಗೆ ಪಾಂಡಿತ್ಯವನ್ನು, ಮೇರುವಿದ್ಯೆಯ ಜೊತೆಗೆ ಮಹಾವಿನಯವನ್ನೂ ಸಂಪಾದಿಸಿದ ಯುಗಾವತಾರಿಯ ಬದುಕಿಗೆ ಮಹಾಮನಾ ಪಂಡಿತ ಮದನ ಮೋಹನ ಮಾಳವೀಯರ ಬದುಕು ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಖ್ಯ ನವದಿಶಾದರ್ಶನಗೈದವು. ಜೀವಶಾಸ್ತ್ರ ಉಪನ್ಯಾಸಕರಾಗಿದ್ದರೂ ಇತರ ವಿಷಯಗಳ ಸಂಶಯಗಳಿಗೂ ಇದಮಿತ್ಥಂ ಉತ್ತರಿಸುತ್ತಿದ್ದ ವೈಖರಿ, ಆಳವಾದ ಗ್ರಹಿಕೆ, ಅಸ್ಖಲಿತ ಬದ್ಧತೆಗೆ ಬೆರಗಾದ ಶಿಷ್ಯವೃಂದದಿಂದ ‘ಗುರೂಜಿ’ ಎಂಬ ಅಭಿಮಾನದ ಅನ್ವರ್ಥನಾಮದ ಉಪಾಧಿಯನ್ನು ಪಡೆದು ಇಳಾರಾಧಕರಿಗೂ ದಿಗ್ದರ್ಶಕ ಗುರೂಜಿಯೇ ಆಗಿ ಪುಣ್ಯಸಂಪಾದನೆಗೆ ಹೊಸದಾರಿತೋರಿ ಅಭಿನವವ್ಯಾಸರಾದರು.

ದೈವೀಸಂಕಲ್ಪವೆಂಬಂತೆ ಭಯ್ಯಾಜಿ ದಾನಿ ಎಂಬ ವಿದ್ಯಾರ್ಥಿಯ ಕಾರಣದಿಂದ ಗುರೂಜಿ ಹಾಗೂ ಸಂಘಸ್ಥಾಪಕ ಡಾಕ್ಟರ್​ಜಿಯವರ ವೈಚಾರಿಕ ಭಾವಸಂಗಮ ವಾದುದು ಭರತಭೂಮಿಗೆ ವರವಾಯಿತು. ಸಂಘವನ್ನು ಬೆಳೆಸಿದ ಡಾಕ್ಟರ್​ಜೀ ದೇಹಾಂತ್ಯದ ತರುವಾಯ ಆ ಮಹೋನ್ನತ ಸ್ಥಾನವನ್ನು ಸಮರ್ಥವಾಗಿ ಮುನ್ನಡೆಸಿದ ಗುರೂಜಿ, ಸಾಮಾಜಿಕ, ಸಾಂಸ್ಕೃತಿಕ, ಧಾರ್ವಿುಕ, ಆರ್ಥಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸನಾತನತೆಯ ಚಿಂತನಾನುಷ್ಠಾನಕ್ಕೆ ಆದ್ಯತೆ ನೀಡಿದರು. ಹಿಂದುತ್ವ ಆಧಾರಿತ ಸಮಾಜನಿರ್ವಣದ ಉದಾರ ದೃಷ್ಟಿಕೋನದಿಂದ ಸಂಘವನ್ನೂ, ರಾಷ್ಟ್ರಜೀವನವನ್ನೂ ರೂಪಿಸುವತ್ತ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟು ಕಾಶ್ಮೀರದ ಅನನ್ಯತೆ ಮತ್ತು ಭಾರತದೊಂದಿಗಿನ ಅವಿಭಾಜ್ಯತೆಗಾಗಿ ಶ್ರಮಿಸಿದರು. ಭವಿಷ್ಯದ ಕಂಟಕಗಳ ಚಿತ್ರಣವನ್ನೂ, ಪರಿಹಾರದ ಮಾಗೋಪಾಯಗಳನ್ನೂ ಸರ್ದಾರ್ ಪಟೇಲರಿಂದ ಶಾಸ್ತ್ರೀಜಿಯವರೆಗೆ ಸದಾಕಾಲ ನೀಡಿದ ಯುಗದೃಷ್ಟರೂ ಹೌದು. ಗಾಂಧಿಹತ್ಯೆಯ ನೆಪವೊಡ್ಡಿ ಸಂಘ ಹಾಗೂ ಸಂಘಕೇಂದ್ರಿತ ಚಟುವಟಿಕೆಗಳನ್ನು ಹತ್ತಿಕ್ಕಲು ಸರ್ಕಾರವೇ ಮುಂದಡಿಯಿಟ್ಟಾಗ, ಆ ಕ್ಲಿಷ್ಟಕರ ಪರೀಕ್ಷೆಯನ್ನು ಗುರೂಜಿ ನಿಭಾಯಿಸಿದ ರೀತಿ ಅತ್ಯಪೂರ್ವ. ಬಂಧನಕ್ಕೊಳಗಾದರೂ, ಮನೆಯ ಮೇಲೆ ಕಲ್ಲುತೂರಾಟವಾದರೂ, ಸ್ವಯಂಸೇವಕರ ನಿತ್ಯದ ಬದುಕು ದುಸ್ತರವಾದರೂ, ‘ಸತ್ಯಾಸತ್ಯಗಳ, ಧರ್ವಧರ್ಮಗಳ, ನ್ಯಾಯಾ ನ್ಯಾಯಗಳ, ಪ್ರೀತಿ-ಮತ್ಸರಗಳ ನಡುವಿನ ಸಂಘರ್ಷದಲ್ಲಿ ಭಗವತ್ಪಥವನ್ನು ಆಯ್ಕೆ ಮಾಡೋಣ. ಮೈಕೊಡವಿ ಎದ್ದು, ಭಾರತಮಾತೆಯ ವಿಜಯಘೊಷ ಮೊಳಗಲು ಸಿದ್ಧರಾಗೋಣ’ ಎಂಬ ಪ್ರೇರಣಾಗಂಗೆಯಲ್ಲಿ ಇಂದಿಗೂ ಸ್ವಯಂಸೇವಕರು ಮಿಂದೇಳುತ್ತಿರುವುದು ಗುರೂಜಿ ಧೀಮಂತಿಕತೆ ಮತ್ತು ನೈತಿಕ ಸ್ಥೈರ್ಯಕ್ಕೆ ಸಾಕ್ಷಿ.

ಸ್ವತಂತ್ರ ಭಾರತದ ಅಭಿವೃದ್ಧಿಗೆ ಸ್ವದೇಶಿ-ಸ್ವಭಾಷಾ-ಗೋರಕ್ಷಾ ಎಂಬ ತ್ರಿಸೂತ್ರಗಳ ಆಧಾರದಲ್ಲಿ ನೀಲಿನಕಾಶೆಯನ್ನು ಸಿದ್ಧಪಡಿಸಿದ ಗುರೂಜಿ ದೇಶದಾದ್ಯಂತ ಪ್ರವಾಸ ಗೈದು ಗೋಹತ್ಯಾ ನಿಷೇಧ ಆಂದೋಲನವನ್ನು ಸಂಘಟಿಸಿದರು. ಪದೇಪದೆ ಆತ್ಮವಿಸ್ಮೃತಿಯ ಕಾಯಿಲೆಗೊಳಗಾಗುವ ಹಿಂದೂಸಮಾಜದ ಸಮುನ್ನತಿಯ ಕಲ್ಪನೆ ಯೊಂದಿಗೆ ಆರಂಭಿಸಿದ ವಿಶ್ವ ಹಿಂದೂ ಪರಿಷತ್ ಜಾಗತಿಕವಾಗಿ ಬೆಳೆದು ವಿಶ್ವದ ಮೂಲೆಮೂಲೆಗಳಲ್ಲಿರುವ ಹಿಂದೂಬಂಧುಗಳ ಆಶಾಕಿರಣವಾಗಿರುವುದು ಗುರೂಜಿ ಚಿಂತನೆಯ ಫಲ. ಮೂರು ದಶಕಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮುನ್ನಡೆಸಿದ ಗುರೂಜಿ, ಎತ್ತೆತ್ತಲೋ ಸಾಗುವ ಆತಂಕದಲ್ಲಿದ್ದ ಭಾರತವನ್ನು ಹಿಂದುತ್ವದ ಏಕಸೂತ್ರದಲ್ಲಿ ಜೋಡಿಸಿದ ಮಾಂತ್ರಿಕ. ಅಂದು ಅವರು ಬಿತ್ತಿದ ಬೀಜ ಇಂದು ಫಲಕೊಡುತ್ತಿದೆ. ‘ತ್ಯಾಗದಿಂದಲೇ ಅಮೃತತ್ವಪ್ರಾಪ್ತಿ’ ಎಂಬ ವೇದವಾಕ್ಯದ ನಿಜಾರ್ಥದ ಅರಿವಾಗಬೇಕಾದರೆ ರಾಷ್ಟ್ರಋಷಿ ಗುರೂಜಿ ಬದುಕನ್ನು ಅಧ್ಯಯನಗೈಯಬೇಕು. ಸಂಘವೆಂಬ ಹೆಮ್ಮರವಿಲ್ಲದಿದ್ದರೆ ಭಾರತದ ಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸುವುದೂ ಕಷ್ಟ. ಭದ್ರಭಾರತದ ಗೆಲುವಿನ ರೂವಾರಿಗಳನ್ನು ನಿರ್ವಿುಸಿದ ತೃಪ್ತಿಯೊಂದಿಗೆ 1973 ಜೂನ್ 5ರಂದು ದಧೀಚಿಲೋಕ ಪ್ರವೇಶಿಸಿದ ಶ್ರೀಗುರೂಜಿ ಕಂಡ ಅತುಲ್ಯಭಾರತದ ನಿರ್ವಣದ ನೊಗಹೊರುವ ಸಂಕಲ್ಪ ನಮ್ಮೆಲ್ಲರದಾಗಲಿ.

| ಆದರ್ಶ ಗೋಖಲೆ

(ಲೇಖಕರು ಯುವ ವಾಗ್ಮಿ, ಗಣಿತಶಾಸ್ತ್ರ ಉಪನ್ಯಾಸಕರು)