ಆರ್.ಕೆ.ಸಿದ್ದರಾಮಣ್ಣ  
ನ್ಯೂಸ್

ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧ ಹಾಸ್ಯಾಸ್ಪದ: ಆರ್‌ಕೆಎಸ್

ಅರವಿಂದ ಅಕ್ಲಾಪುರ

ಶಿವಮೊಗ್ಗ: ಭಾರತ್ ಮಾತಾ ಕೀ ಜೈ ಎನ್ನುವ ಆರ್‌ಎಸ್‌ಎಸ್‌ನ ಸ್ವಯಂ ಸೇವಕರನ್ನು ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಸಿದ್ದರಾಮಯ್ಯ ಸಹಿಸುವುದಿಲ್ಲ. ವಿಧಾನ ಸೌಧದೊಳಗೆ ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಕಂಡರೆ ಅವರಿಗೆ ಖುಷಿ. ಇದೇ ಕಾರಣಕ್ಕೆ ಸಂಘದ ಚಟುವಟಿಕೆಗಳನ್ನು ನಿರ್ಬಂಧಿಸುವ ಚರ್ಚೆಗೆ ಅವರಿಬ್ಬರೂ ಕಾರಣರಾಗಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಐಕ್ಯತೆ, ಸಾರ್ವಭೌಮತ್ವ, ಜಾತ್ಯತೀತತೆ, ಪ್ರಜಾಪ್ರಭುತ್ವ ಕಾಪಾಡಬೇಕೆಂಬುದು ಸಂವಿಧಾನದ ಆಶಯ. ಸಂಘ ಅದರಂತೆಯೇ ಕೆಲಸ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್‌ನಲ್ಲಿ ಅದೇನು ದೋಷ ಕಂಡಿದೆಯೋ ಗೊತ್ತಿಲ್ಲ. ಅವರು ಪ್ರತಿದಿನ ಒಂದು ತಾಸು ಸಂಘದ ಶಾಖೆಗೆ ಬಂದು ಆರ್‌ಎಸ್‌ಎಸ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದರು.

ಆರ್‌ಎಸ್‌ಎಸ್ ಸಮಾಜದ ವಿಭಜನೆ ಮಾಡುತ್ತಿದೆ. ದ್ವೇಷ ಮೂಡಿಸುತ್ತಿದೆ ಎಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಪ್ರಿಯಾಂಕ್ ಉಲ್ಲೇಖಿಸಿರುವುದು ಹಾಸ್ಯಾಸ್ಪದ. ಗಣವೇಷದ ಭಾಗವಾಗಿರುವ ದಂಡವನ್ನು ಮಾರಕಾಸ್ತ್ರ ಎಂದು ಅವರು ಭಾವಿಸಿದ್ದಾರೆ. ದಂಡ ಇರಿಸಿಕೊಳ್ಳಲು ಪೊಲೀಸರ ಪರವಾನಗಿ ಪಡಯಬೇಕಿಲ್ಲ ಎಂದರು.

ರಾಹುಲ್ ಗಾಂಧಿ ಹಾಗೂ ಕಂಪನಿಯನ್ನು ಮೆಚ್ಚಿಸುವ, ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರಿಯಾಂಕ್ ಹಾಗೂ ಸಿದ್ದರಾಮಯ್ಯ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸುವ ಮಾತನ್ನಾಡುತ್ತಿದ್ದಾರೆ. ಇದು ವೋಟ್ ಬ್ಯಾಂಕ್ ರಾಜಕಾರಣ. ಆರ್‌ಎಸ್‌ಎಸ್‌ಗೆ ಹಿನ್ನಡೆಯಾಗುತ್ತದೆ ಎಂಬ ಭಯ ಇಲ್ಲ ಎಂದು ಹೇಳಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಶ್ರೀನಾಗ್, ಚಂದ್ರಶೇಖರ್ ಇತರರಿದ್ದರು.