ನ್ಯೂಸ್

60 ಕೋಟಿ ರೂ. ವಂಚನೆ ಪ್ರಕರಣ: 5 ಗಂಟೆ ವಿಚಾರಣೆ ಎದುರಿಸಿದ ನಟಿ ಶಿಲ್ಪಾಶೆಟ್ಟಿ-ರಾಜ್ ಕುಂದ್ರಾ!

60 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟಿ ಶಿಲ್ಪಾಶೆಟ್ಟಿ ಅವರ ಪತಿ ಉದ್ಯಮಿ ರಾಜ್​ ಕುಂದ್ರಾ ಅವರನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಸೋಮವಾರ ಸುಮಾರು 5 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಈ ಪ್ರಕರಣಕ್ಕೆ ಸಂಬಧಿಸಿದಂತೆ ಶಿಲ್ಪಾಶೆಟ್ಟಿ, ರಾಜ್​ಕುಂದ್ರಾ ಸೇರಿ ಐವರನ್ನು ವಿಚಾರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಈ ಹಿಂದಿಯೇ ಮುಂಬೈ ಪೊಲೀಸರು ದಂಪತಿಗಳಿಗೆ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದರು.

ಶಿಲ್ಪಾ ಹೇಳಿದ್ದೇನು?

ವರದಿ ಪ್ರಕಾರ, ಶಿಲ್ಪಾ ತಮ್ಮ ಜಾಹೀರಾತು ಕಂಪನಿಯ ಬ್ಯಾಂಕ್ ಖಾತೆಯಲ್ಲಿ ನಡೆದಿರುವ ಆಪಾದಿತ ವಹಿವಾಟುಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಹಲವಾರು ದಾಖಲೆಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಅವುಗಳನ್ನು ತನಿಖೆ ನಡೆಸಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಪ್ರಕರಣವೇನು?

2015 ರಿಂದ 2023 ರ ನಡುವೆ ಕುಂದ್ರಾ ದಂಪತಿ ತಮ್ಮ ವ್ಯವಹಾರವನ್ನು ವಿಸ್ತರಿಸುವ ನೆಪದಲ್ಲಿ ತಮ್ಮಿಂದ ಹಣವನ್ನು ಪಡೆದು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು 60 ವರ್ಷದ ದೀಪಕ್ ಕೊಠಾರಿ ಪೊಲೀಸ್ ದೂರಿನಲ್ಲಿ ಹೇಳಿದ್ದಾರೆ. (ಏಜೆನ್ಸೀಸ್​)