ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಸಮರ್ಪಕ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಕ್ಷೇತ್ರದಲ್ಲಿ ಈಗಾಗಲೇ 25 ಸಾವಿರ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸಿದೆ. ಮುಂಬರುವ ದಿನಗಳಲ್ಲಿ ಇನ್ನೂ 15 ಸಾವಿರ ಕೂಟಿ ರೂ. ಹೂಡಿಕೆ ಇಲ್ಲಿ ಸಾಧ್ಯವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಕೆಂಗೇರಿ ಸಮೀಪದ ಮೈಲಸಸಂದ್ರದಲ್ಲಿ ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿ ಸ್ಥಾಪಿಸಿರುವ ಜಾಗತಿಕ ಮಟ್ಟದ ವಿದ್ಯುತ್ ಚಾಲಿತ ವಾಹನಗಳ ಉತ್ಕೃಷ್ಟತಾ ಮತ್ತು ನಾವೀನ್ಯತಾ ಕೇಂದ್ರವನ್ನು ಬುಧವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮೊದಲಿಗೆ 2017ರಲ್ಲಿ ವಿದ್ಯುತ್ ಚಾಲಿತ ವಾಹನಗಳ ನೀತಿ ಜಾರಿಗೆ ತರಲಾಯಿತು. 2021ರಲ್ಲಿ ಇದನ್ನು ಜಾಗತಿಕ ಮಟ್ಟಕ್ಕೆ ತಕ್ಕಂತೆ ಪರಿಷ್ಕರಿಸಲಾಯಿತು. ರಾಜ್ಯದ ನೀತಿಯು ಇ.ವಿ.ಬ್ಯಾಟರಿ ಮತ್ತು ಕೋಶಗಳ ಉತ್ಪಾದನೆ, ಬಿಡಿಭಾಗಗಳ ತಯಾರಿಕೆ, ಒಇಎಂ (ಒರಿಜನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್ಸ್), ಚಾರ್ಜಿಂಗ್ ಮತ್ತು ಪರೀಕ್ಷಾರ್ಥ ಮೂಲಸೌಲಭ್ಯ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಯ ಸಮಗ್ರ ಮೌಲ್ಯ ಸರಪಳಿಯನ್ನು ಒಳಗೊಂಡಿದೆ ಎಂದರು.
ರಾಜ್ಯದಲ್ಲಿ ಸದ್ಯಕ್ಕೆ 2 ಲಕ್ಷ ವಿದ್ಯುತ್ ಚಾಲಿತ ವಾಹನಗಳು ನೋಂದಣಿಯಾಗಿದ್ದು, ದೇಶಕ್ಕೆ ಮೂರನೇ ಸ್ಥಾನದಲ್ಲಿದ್ದೇವೆ. ಮುಂಬರುವ ದಿನಗಳಲ್ಲಿ ಇ.ವಿ.ವಾಹನಗಳು ಮತ್ತಷ್ಟು ಜನಪ್ರಿಯವಾಗಲಿದ್ದು, ಸುಗಮ, ತ್ವರಿತ, ಸುರಕ್ಷಿತ ಮತ್ತು ಮಾಲಿನ್ಯರಹಿತ ಸಂಚಾರವನ್ನು ಸಾಧ್ಯವಾಗಿಸಲಿವೆ. ಇನ್ನು ಒಂದು ದಶಕದಲ್ಲಿ ಸಾಂಪ್ರದಾಯಿಕ ಇಂಧನದ ವಾಹನಗಳು ನೇಪಥ್ಯಕ್ಕೆ ಸರಿಯಲಿವೆ ಎಂದು ಎಂ.ಬಿ.ಪಾಟೀಲ ಹೇಳಿದರು.
ಕರ್ನಾಟಕದಲ್ಲಿ ಸದ್ಯಕ್ಕೆ ಈ ಕ್ಷೇತ್ರದಲ್ಲಿ 7 ಒಇಎಂ, ಬಿಡಿಭಾಗಗಳನ್ನು ತಯಾರಿಸುವ 50 ಕಂಪನಿಗಳು, 45 ನವೋದ್ಯಮಗಳು, ಅತ್ಯಧಿಕ ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಈ ಕ್ಷೇತ್ರವು ಸಾವಿರಾರು ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಸಜ್ಜುಗೊಳಿಸುವ ಉಪಕ್ರಮವನ್ನು ಶಿಕ್ಷಣ ಕ್ರಮ ಅಳವಡಿಸಿಕೊಳ್ಳಲಾಗಿದೆ.
ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿಯಲ್ಲಿ ಸ್ಥಾಪಿಸಿರುವ ಉತ್ಕೃಷ್ಟತಾ ಮತ್ತು ನಾವೀನ್ಯತಾ ಕೇಂದ್ರವು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಇದು ತರಬೇತಿ, ಸಂಶೋಧನೆ, ಕೌಶಲಾಭಿವೃದ್ಧಿ, ಸಹಭಾಗಿತ್ವ ಮತ್ತು ಪರಿಪೋಷಣೆಗಳಿಗೆ ಉತ್ತಮ ವೇದಿಕೆಯಾಗಲಿದೆ. ಇದು ಅಂತಿಮವಾಗಿ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಚಿಮ್ಮುಹಲಗೆಯಾಗಿ ಕೆಲಸ ಮಾಡಲಿದೆ ಎಂದು ಎಂ.ಬಿ.ಪಾಟೀಲ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮ್ಕೂ ಮೊದಲು ಸಚಿವರು ಉತ್ಕೃಷ್ಟತಾ ಕೇಂದ್ರದಲ್ಲಿರುವ 3ಡಿ ಎಕ್ಸ್ಪೀರಿಯನ್ಸ್ ಲ್ಯಾಬ್, ಸರ್ವೀಸ್ ಲ್ಯಾಬ್, ಬಿಡಿಭಾಗಗಳ ಲ್ಯಾಬ್ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಭೇಟಿ ನೀಡಿ, ಅಲ್ಲಿನ ಸಾಧನ-ಸಲಕರಣೆಗಳು ಮತ್ತು ಸೌಲಭ್ಯಗಳನ್ನು ವೀಕ್ಷಿಸಿ, ವಿವರಣೆ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸಂಸದ ಡಿ.ವಿ.ಸದಾನಂದ ಗೌಡ, ಶಾಸಕ ಎಸ್. ಟಿ.ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು.