ನ್ಯೂಸ್

೩೯.೫೦ ಕೋಟಿ ರೂ. ವೆಚ್ಚದ ಜಿಲ್ಲಾ ನ್ಯಾಯಾಲಯ ಕಟ್ಟಡ ಲೋಕಾರ್ಪಣೆ

ಮಡಿಕೇರಿ: ನಗರದ ವಿದ್ಯಾನಗರ ಬಳಿ ೩೯.೫೦ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ನ್ಯಾಯಾಲಯದ ಕಟ್ಟಡವನ್ನು ಸುಪ್ರೀಂಕೋರ್ಟ್ ಗೌರವಾನ್ವಿತ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ, ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಲೆರವರು ಶನಿವಾರ ಲೋಕಾರ್ಪಣೆ ಮಾಡಿದರು.


ನಂತರ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಲಯಕ್ಕೆ ಸಲ್ಲಿಕೆ ಆಗುವ ಪ್ರಕರಣಗಳನ್ನು ತ್ವರಿತವಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲರೂ ಶ್ರಮಿಸಬೇಕು. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ನ್ಯಾಯಾಲಯ ಮತ್ತು ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸುವುದು ಅತ್ಯಗತ್ಯ ಎಂದು ಬೋಪಣ್ಣ ಹೇಳಿದರು.


ನೂತನವಾಗಿ ನಿರ್ಮಿಸಿರುವ ನ್ಯಾಯಾಲಯ ಸಂಕೀರ್ಣದಲ್ಲಿ ಎಲ್ಲಾ ರೀತಿಯ ಮೂಲ ಸೌಲಭ್ಯ ಹೊಂದಿದ್ದು, ಮುಖ್ಯ ನ್ಯಾಯಾಲಯ, ಮಹಿಳಾ, ಕಾರ್ಮಿಕ, ಹೀಗೆ ಒಂಬತ್ತು ರೀತಿಯ ನ್ಯಾಯಾಲಯ ಕಾರ್ಯಕಲಾಪಗಳನ್ನು ನಡೆಸಲು ಪ್ರತ್ಯೇಕ ಕೊಠಡಿ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಒಳಗೊಂಡಿದೆ. ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳ ಸಹಕಾರ ಅತ್ಯಮೂಲ್ಯವಾಗಿದೆ ಎಂದು ಎ.ಎಸ್.ಬೋಪಣ್ಣ ತಿಳಿಸಿದರು.


ಕೊಡಗು ಸೇನಾ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಸಹ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರಾಗಿ, ಅಡ್ವಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊಡಗು ಜನಸಂಖ್ಯೆಯಲ್ಲಿ ಪುಟ್ಟ ಜಿಲ್ಲೆಯಾದರೂ ಸಹ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವುದು ವಿಶೇಷ ಎಂದು ಹೇಳಿದರು.


ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಲೆ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಪ್ರಕರಣ ವಿಲೇವಾರಿ ಸಂಖ್ಯೆ ಹೆಚ್ಚಾಗಬೇಕು. ಎಲ್ಲರಿಗೂ ನ್ಯಾಯ ಸಿಗಬೇಕು. ನ್ಯಾಯಾಲಯ ಸಂಕೀರ್ಣವು ದೇವಸ್ಥಾನವಿದ್ದಂತೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಬೇಕು ಎಂದರು.


ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ವಿಶ್ವದಲ್ಲಿಯೇ ಮಾದರಿಯಾದ ಸಂವಿಧಾನವನ್ನು ಭಾರತ ಒಳಗೊಂಡಿದೆ. ಯಾರೇ ತಪ್ಪು ಮಾಡಿದರೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇಂದಿಗೂ ಜನರಲ್ಲಿ ನ್ಯಾಯಾಂಗದ ಮೇಲೆ ನಂಬಿಕೆ, ವಿಶ್ವಾಸ ಉಳಿಸಿಕೊಂಡಿದೆ ಎಂದರು.


ನ್ಯಾಯಾಂಗದಿಂದ ಬರುವ ಎಲ್ಲಾ ಪ್ರಸ್ತಾವನೆಗಳಿಗೆ ಸರ್ಕಾರ ಸ್ಪಂದಿಸಿದೆ. ಮುಂದೆಯೂ ಸಹ ನ್ಯಾಯಾಂಗಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಎಲ್ಲಾ ವರ್ಗದ ಜನರಿಗೆ ನ್ಯಾಯ ಸಿಗುವಂತಾಗಲಿ ಎಂದು ಕೆ.ಜಿ.ಬೋಪಯ್ಯ ಆಶಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಐದು ಎಕರೆ ಜಾಗದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇನ್ನೂ ೫ ಎಕರೆ ಜಾಗವನ್ನು ವಸತಿ ಗೃಹ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ. ಹಾಗೆಯೇ ಕುಶಾಲನಗರದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದರು.


ಹೈಕೋರ್ಟ್‌ನ ನ್ಯಾಯಾಧೀಶ ಎಂ.ಜಿ.ಶುಕುರೆ ಕಮಲ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು. ಜನಸಾಮಾನ್ಯರಿಗೆ ನ್ಯಾಯ ದೊರಕಿದಾಗ ಉತ್ತಮ ಜೀವನ ನಡೆಸಲು ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಯಗಳು ಆಗಬೇಕು ಎಂದು ಹೇಳಿದರು.
ಹೈಕೋರ್ಟ್ ನ್ಯಾಯಾಧೀಶ ಸಿ.ಎಂ.ಪೂಣಚ್ಚ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಉಳಿಸಿಕೊಂಡು ಹೋಗಬೇಕು. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗಕ್ಕೆ ತನ್ನದೇ ಆದ ಸ್ಥಾನವಿದೆ ಎಂದು ಹೇಳಿದರು.


ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಮತ್ತು ಕೊಡಗು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಇ.ಎಸ್.ಇಂದ್ರೇಶ್, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ, ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎಂ.ಭೃಂಗೇಶ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ.ಅರುಣ್ ಕುಮಾರ್, ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷ ರತನ್ ತಮ್ಮಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಇತರರು ಇದ್ದರು.