ಬೆಂಗಳೂರು: ( money stolen from actor darshan house ) ಸ್ಯಾಂಡಲ್ವುಡ್ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಪ್ಲ್ಯಾಟ್ನಲ್ಲಿ 3 ಲಕ್ಷ ರೂಪಾಯಿ ಕಳ್ಳತನವಾಗಿದೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ವಿಜಯಲಕ್ಷ್ಮೀ ಅವರ ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ. ಅವರ ಮನೆಯಿಂದ 3 ಲಕ್ಷ ರೂಪಾಯಿ ಕದ್ದುಕೊಂಡು ಹೋಗಲಾಗಿದೆ. ವಿಜಯಲಕ್ಷ್ಮೀ ಅವರು ಮನೆ ಕೆಲಸದವರ ಮೇಲೆ ಅನುಮಾನ ಹೊರಹಾಕಿದ್ದಾರೆ. ಮನೆ ಕೆಲಸದವರ ಮೇಲೆ ದೂರು ದಾಖಲು ಮಾಡಲಾಗಿದೆ.
ಕಳ್ಳತನ ಪ್ರಕರಣ ಸಂಬಂಧಿಸಿದಂತೆ ವಿಜಯಲಕ್ಷ್ಮೀ ಮ್ಯಾನೇಜರ್ ನಾಗರಾಜ್ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ದಾಖಲು ಮಾಡಿದ್ದಾರೆ.
ಸೆಪ್ಟಂಬರ್ 4 ರಂದು ಮನೆಯ ವಾರ್ಡ್ ರೋಬ್ನಲ್ಲಿರುವ ಹಣ ತೆಗೆದುಕೊಡಲು ವಿಜಯಲಕ್ಷ್ಮಿ, ತಮ್ಮ ಮ್ಯಾನೇಜರ್ ನಾಗರಾಜ್‌ಗೆ ಹೇಳಿದ್ದರು. ಸ್ವಲ್ಪ ಹಣ ತೆಗೆದು ಕೊಟ್ಟು ಉಳಿದ ಹಣವನ್ನು ಮ್ಯಾನೇಜರ್ ನಾಗರಾಜ್ ಅಲ್ಲೇ ಇಟ್ಟಿದ್ದರಂತೆ. ಅದೇ ದಿನ ಮೈಸೂರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತೆರಳಿದ್ದಾರೆ. ಮನೆಯ ಬೀಗವನ್ನು ತಾಯಿಗೆ ಕೊಟ್ಟು ಕೆಲಸದ ಮೇಲೆ ಮ್ಯಾನೇಜರ್ ನಾಗರಾಜ್ ಕೂಡ ಹೊರಗೆ ತೆರಳಿದ್ದಾರೆ. ಸೆಪ್ಟಂಬರ್ 7 ರಂದು ವಿಜಯಲಕ್ಷ್ಮಿ ಬೆಂಗಳೂರಿಗೆ ವಾಪಸ್ ಬಂದಿದ್ದರು . ಸೆಪ್ಟಂಬರ್ 8 ರಂದು ವಾರ್ಡ್ ರೋಬ್ ನಲ್ಲಿ ಹಣ ನೋಡಿದಾಗ ನಾಪತ್ತೆಯಾಗಿತ್ತು. ಮನೆಯ ಎಲ್ಲಾ ಕಡೆ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಹುಡುಕಾಟ ನಡೆಸಿದ್ದರು. ಬಳಿಕ ಮನೆಯ ಕೆಲಸದವರನ್ನು ವಿಚಾರಿಸಿದಾಗ ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಮನೆಯ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ದಾಲಿಸಿದ್ದಾರೆ ಎನ್ನಲಾಗಿದೆ.