ನ್ಯೂಸ್

ಈ ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 3 ಲಕ್ಷ ರೂಪಾಯಿ ಬಹುಮಾನ...

ಬೆಂಗಳೂರು: ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆ ಬಲಗೊಳಿಸಲು ಮುಂದಾಗಿದ್ದ ಜಿಹಾದಿ ಗ್ಯಾಂಗ್‌ನ ಶಂಕಿತ ಉಗ್ರ ಅಬ್ದುಲ್ ಮಥೀನ್ ಅಹ್ಮದ್ ತಾಹಾ(26) ತಲೆಗೆ 3 ಲಕ್ಷ ರೂ. ಬಹುಮಾನವನ್ನು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಘೋಷಣೆ ಮಾಡಿದೆ.

2019ರ ಡಿಸೆಂಬರ್​ನಲ್ಲಿ ತಮಿಳುನಾಡಿದನ ಹಿಂದು ಮಕ್ಕಳ ಕಚ್ಚಿ ಸಂಘಟನೆಯ ಕೆ.ಸಿ.ಸುರೇಶ್​ ಕೊಲೆ ಪ್ರಕರಣದ ಶಂಕಿತ ಮೊಯ್ದೀನ್​ ಸಿ ಕ್ವಾಜಾ ಗ್ಯಾಂಗ್​ ಸುದ್ದಗುಂಟೆಪಾಳ್ಯದ ಮೆಹಬೂಬ್ ಪಾಷಾ ಎಂಬುವನ ಮನೆಯಲ್ಲಿ ಆಶ್ರಯ ಪಡೆದಿತ್ತು.

ದಕ್ಷಿಣ ಭಾರತದಲ್ಲಿ ಐಸಿಸ್​ ಉಗ್ರಸಂಘಟನೆ ಬಲಗೊಳಿಸಲು ಪ್ರಯತ್ನಿಸುತ್ತಿದ್ದ ಈ ಮೆಹಬೂಬ್​ ಪಾಷಾನೊಂದಿಗೆ ಅಹ್ಮದ್ ತಾಹಾ ನಿಕಟ ಸಂಪರ್ಕಹೊಂದಿದ್ದ. ಮೆಹಬೂಬ್ ಪಾಷಾಗೆ ಸೇರಿದ ಗುರುಪ್ಪನಪಾಳ್ಯದ ಮನೆಯಲ್ಲಿ ಉಗ್ರ ಚಟುವಟಿಕೆಗಳ ಕುರಿತು 2019ರಲ್ಲಿ ನಡೆದಿದ್ದ ಸಭೆಗಳಲ್ಲಿ ಭಾಗವಹಿಸಿದ್ದ. ಐಸಿಸ್‌ಗೆ ಹೊಸ ಕಾರ್ಯಕರ್ತರ ನೇಮಕ ಮುಂತಾದ ಚಟುವಟಿಕೆಯಲ್ಲಿ ಅಹ್ಮದ್ ತಾಹಾ ಪ್ರಮುಖ ಪಾತ್ರ ವಹಿಸಿದ್ದ. ನಂತರ ಸಹಚರರ ಬಂಧನದ ಬಳಿಕ ಅಹ್ಮದ್ ತಾಹಾ ತಲೆಮರೆಸಿಕೊಂಡಿದ್ದಾನೆ. ನಂತರ ಶಿವಮೊಗ್ಗದ ತೀರ್ಥಹಳ್ಳಿ ಗ್ರಾಮಾಂತರದ ಮೀನಿನ ಮಾರುಕಟ್ಟೆ ಸಮೀಪ ನೆಲೆಸಿದ್ದ ಎಂಬ ಮಾಹಿತಿ ಇತ್ತು.

ಈ ಬಗ್ಗೆ ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೇ ಉಗ್ರ ಅಬ್ದುಲ್​ ಮಥೀನ್​ ಅಹ್ಮದ್​ ತಾಹಾ(26)ನ ಸುಳಿವು ಕೊಟ್ಟವರಿಗೆ 3 ಲಕ್ಷ ರೂ. ಬಹುಮಾನ ಕೊಡುವುದಾಗಿ ಎನ್‌ಐಎ ಅಧಿಕಾರಿಗಳು ಬುಧವಾರ ಘೋಷಿಸಿದ್ದಾರೆ.