ನವದೆಹಲಿ: ದೆಹಲಿಯ ಜಂಗ್‌ಪುರ ಪ್ರದೇಶದ ಆಭರಣ ಮಳಿಗೆಯಲ್ಲಿ 25 ಕೋಟಿ ರೂಪಾಯಿ ಕಳ್ಳತನ ಮಾಡಿದ್ದ ಕಳ್ಳರು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕಳ್ಳತನದ ನಂತರ ಆರೋಪಿಗಳು ಛತ್ತೀಸ್‌ಗಢದಲ್ಲಿ ತಲೆಮರೆಸಿಕೊಂಡಿದ್ದರು. ಇವರಿಂದ 18 ಕೆಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 15 ಕೋಟಿ ರೂ. ಛತ್ತೀಸ್‌ಗಢ ಪೊಲೀಸರು ಈ ಕಳ್ಳತನದ ಮಾಸ್ಟರ್‌ಮೈಂಡ್ ಲೋಕೇಶ್ ಶ್ರೀವಾಸ್‌ನನ್ನು ಕೂಡ ಬಂಧಿಸಿದ್ದಾರೆ. ಲೋಕೇಶ್ ಸಣ್ಣ ಕಳ್ಳನಲ್ಲ. ಈತ ಈಗಾಗಲೇ ದೊಡ್ಡ ಕಳ್ಳತನ ಕೃತ್ಯ ಎಸಗಿದ್ದಾನೆ. ಅವನ ಅಪರಾಧದ ಇತಿಹಾಸ ಬಹಳ ಹಳೆಯದು.
ಲೋಕೇಶ್ ಶ್ರೀವಾಸ್ ಯಾರು?
ದೆಹಲಿಯ ಜಂಗ್‌ಪುರ ಪ್ರದೇಶದ ಭೋಗಲ್ ಮಾರ್ಕೆಟ್‌ನಲ್ಲಿರುವ ಉಮ್ರಾವ್ ಸಿಂಗ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಕಳ್ಳರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇವರಲ್ಲಿ ಒರ್ವ ಕಳ್ಳ ಕಳ್ಳರ ನಾಯಕ. ಅವನ ಹೆಸರು ಲೋಕೇಶ್ ಶ್ರೀವಾನ್. ಈತ ಕವರ್ಧಾ ಜಿಲ್ಲೆಯ ನಿವಾಸಿ, ಈತ ಎಷ್ಟು ಚತುರನಾಗಿದ್ದನೆಂದರೆ ಛತ್ತೀಸ್ ಗಢ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಕಳ್ಳತನ ಕೃತ್ಯ ಎಸಗಿದ್ದಾನೆ. ಇದೇ ಕಾರಣಕ್ಕೆ ಈತನ ವಿರುದ್ಧ ತೆಲಂಗಾಣ, ಮಹಾರಾಷ್ಟ್ರ, ದೆಹಲಿ ಮತ್ತು ಛತ್ತೀಸ್‌ಗಢದಲ್ಲಿ ಹಿಂದಿನ ಕಳ್ಳತನಕ್ಕೆ ಸಂಬಂಧಿಸಿದಂತೆ ಹಲವು ಎಫ್‌ಐಆರ್‌ಗಳು ದಾಖಲಾಗಿವೆ.
ಬಿಲಾಸ್‌ಪುರ ಮತ್ತು ರಾಜನಂದಗಾಂವ್ ಪೊಲೀಸರು ಲೋಕೇಶ್‌ಗಾಗಿ ಹುಡುಕಾಟ ನಡೆಸಿದ್ದರು. ಇದಕ್ಕೂ ಮುನ್ನ ಆಕಾಶಗಂಗಾದ ಪರಾಖ್ ಜ್ಯುವೆಲ್ಲರ್ಸ್‌ನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ದುರ್ಗ ಪೊಲೀಸರು ಲೋಕೇಶ್‌ನನ್ನು ಬಂಧಿಸಿದ್ದರು. ಈ ವೇಳೆ ಆತನಿಂದ ಕಳ್ಳತನವಾದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಲೋಕೇಶ್‌ನ ಇತರ ಸಹಚರ ಶಿವ ಚಂದ್ರವಂಶಿಯನ್ನು ಬಿಲಾಸ್‌ಪುರ ಪೊಲೀಸರು ಕವರ್ಧಾದಿಂದ ಬಂಧಿಸಿದ್ದಾರೆ. ಆತನಿಂದ ಚಿನ್ನಾಭರಣ ಸೇರಿದಂತೆ 23 ಲಕ್ಷ ಮೌಲ್ಯದ ಕಳವು ಮಾಲು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಶಿವನನ್ನು ಬಂಧಿಸಲು ಹೋದಾಗ, ಲೋಕೇಶ್ ಕೂಡ ಅಲ್ಲಿಯೇ ಇದ್ದನು, ಆದರೆ ಅವನು ಕಿಟಕಿಯಿಂದ ಹಾರಿ ಪರಾರಿಯಾಗಿದ್ದಾನೆ.
12.5 ಲಕ್ಷ ನಗದು ಪತ್ತೆ
ಸುದ್ದಿ ಸಂಸ್ಥೆ ANI ಪ್ರಕಾರ, ಕಳ್ಳತನ ಪ್ರಕರಣದಲ್ಲಿ ಪೊಲೀಸರು ಛತ್ತೀಸ್‌ಗಢದ ಇಬ್ಬರನ್ನು ಬಂಧಿಸಿದ್ದಾರೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯಿಂದ 12.5 ಲಕ್ಷ ರೂಪಾಯಿ ನಗದು ಮತ್ತು 18 ಕೆಜಿಗೂ ಹೆಚ್ಚು ಚಿನ್ನ ಮತ್ತು ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಲವು ಕಡೆ ದಾಳಿ
ದೆಹಲಿಯ ಜಂಗ್‌ಪುರ ಪ್ರದೇಶದ ಆಭರಣ ಮಳಿಗೆಯಿಂದ ಭಾನುವಾರ 25 ಕೋಟಿ ರೂಪಾಯಿ ಕಳ್ಳತನವಾಗಿದೆ ಎಂಬುದು ಗಮನಾರ್ಹ. ಶೋರೂಂನ ಮೇಲ್ಛಾವಣಿ ಮೂಲಕ ಕಳ್ಳರು ನುಗ್ಗಿದ್ದಾರೆ ಎನ್ನಲಾಗಿದೆ. ದೆಹಲಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ದುರ್ಗ್ ಮತ್ತು ಬಿಲಾಸ್‌ಪುರ ಪೊಲೀಸರ ಸೂಚನೆ ಮೇರೆಗೆ ಅವರು ವಿವಿಧೆಡೆ ದಾಳಿ ನಡೆಸಿದರು. ಈ ವೇಳೆ ಅವರು ಭಿಲಾಯ್‌ನ ಸ್ಮೃತಿ ನಗರದಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಲೋಕೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಇವನು ಇಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದನು.