ನ್ಯೂಸ್

25 ಕೋಟಿ ರೂ. 90 ದಿನದೊಳಗೆ ಪಾವತಿಸಿ.. ಇಲ್ಲವಾದರೆ ನೇರವಾಗಿ ಜೈಲಿಗೆ ಹೋಗಿ; ಮಹತ್ವದ ಆದೇಶ ಹೊರಡಿಸಿದ ​Supreme Court: ಏನಿದು ಪ್ರಕರಣ?

Supreme Court : ವಂಚನೆ(ಗೋಲ್ಡ್​ ಹಗರಣ)ಆರೋಪದಡಿ ಸಿಲುಕಿರುವ ಆರೋಪಿಗೆ, ಹೂಡಿಕೆದಾರರಿಂದ ತಗೆದುಕೊಂಡ 25 ಕೋಟಿ ರೂ. 90 ದಿನದೊಳಗೆ ಪಾವತಿಸಿ, ಇಲ್ಲವಾದರೆ ನೇರವಾಗಿ ಜೈಲಿಗೆ ಹೋಗಿ ಎಂದು ಸುಪ್ರೀಂಕೋರ್ಟ್​ ಬುಧುವಾರ ಮಹತ್ವದ ಆದೇಶ ನೀಡಿದೆ.

ಆರೋಪಿ ನೌಹೇರಾ ಶೇಖ್ ವಿರುದ್ಧ ಸುಪ್ರಿಂಕೋರ್ಟ್​ನಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಹೂಡಿಕೆದಾರರಿಂದ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಅಂದರೆ 25 ಕೋಟಿ ರೂ.ಗಳನ್ನು 90 ದಿನಗಳಲ್ಲಿ ಮರುಪಾವತಿಸದಿದ್ದರೆ, ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠ ಜಾರಿ ನಿರ್ದೇಶನಾಲಯಕ್ಕೆ (ED) ಆದೇಶಿಸಿದೆ.​

ಮೂರು ತಿಂಗಳ ಅವಧಿಯಲ್ಲಿ ಆರೋಪಿಯು 25 ಕೋಟಿ ರೂ.ಗಳನ್ನು ಠೇವಣಿ ಇಡಬೇಕು. ಇಲ್ಲದಿದ್ದರೆ ಆಕೆಯ ಜಾಮೀನು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಮತ್ತು ಜಾರಿ ನಿರ್ದೇಶನಾಲಯವು ಆಕೆಯನ್ನು ಮತ್ತೆ ಜೈಲಿಗೆ ಕಳುಹಿಸುತ್ತದೆ ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಹೇಳಿದರು.

ಯಾರು ಈ ನೌಹೇರಾ ಶೇಖ್​..?

ಹೀರಾ ಗೋಲ್ಡ್​ ಎಕ್ಸಿಮ್​ ಪ್ರೈ.ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕಿ ನೌಹೇರಾ ಶೇಖ್​ ಎನ್ನುವವರು ಸಾವಿರಾರು ಸಣ್ಣ ಹೂಡಿಕೆದಾದರಿಂದ 5,600 ಕೋಟಿ ರೂ. ಈ ವಂಚನೆ ಮಾಡಿದ್ದಾರೆ ಎಂಬ ಆರೋಪ ಎದುರಿಸುದ್ದಾರೆ. ಇನ್ನು ಇವರ ವಿರುದ್ಧ ವಂಚನೆ ಆರೋಪದಡಿ ಹಲವು ರಾಜ್ಯಗಳಲ್ಲಿ ದೂರು ದಾಖಲಾಗಿದೆ.

ಆರಂಭದಲ್ಲಿ ಹೂಡಿಕೆದಾರರಿಗೆ ಕಂಪನಿ ಲಾಭಾಂಶವನ್ನು ಪಾವತಿಸಿತು. ಆದರೆ, 2018 ರಲ್ಲಿ ಕೆಲವು ಹೂಡಿಕೆದಾರರು ಕಂಪನಿ ಮತ್ತು ಶೇಕ್ ಅವರಿಂದ ವಂಚನೆ ಆರೋಪದ ಮೇಲೆ ದೂರುಗಳನ್ನು ದಾಖಲಿಸಿದರು. ಅವರನ್ನು ಅಕ್ಟೋಬರ್ 2018 ರಲ್ಲಿ ಬಂಧಿಸಲಾಯಿತು.(ಏಜೆನ್ಸೀಸ್)