ನ್ಯೂಸ್

ಕೇಂದ್ರ ಬಜೆಟ್​ 2020: ಇಂಧನ ವಲಯ ನವೀಕರಣಕ್ಕೆ 22,000 ಕೋಟಿ ರೂ.ವಿನಿಯೋಗ; ಇನ್ನು 3 ವರ್ಷಗಳಲ್ಲಿ ಸ್ಮಾರ್ಟ್​ ಪ್ರಿಪೇಯ್ಡ್​ ವಿದ್ಯುತ್​ ಮೀಟರ್​ ಅಳವಡಿಕೆ ಕಡ್ಡಾಯ

ನವದೆಹಲಿ: ವಿದ್ಯುತ್​ ಹಾಗೂ ಇಂಧನ ವಲಯದ ನವೀಕರಣಕ್ಕಾಗಿ 22,000 ಕೋಟಿ ರೂಪಾಯಿ ವಿನಿಯೋಗ ಮಾಡುವ ಪ್ರಸ್ತಾಪ ಕೇಂದ್ರ ಸರ್ಕಾರದ ಎದುರು ಇದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ವೇಳೆ ತಿಳಿಸಿದ್ದಾರೆ.

ವಿದ್ಯುತ್​ ಸರಬರಾಜು ಕಂಪನಿಗಳು ಸಾಂಪ್ರದಾಯಿಕ ವಿದ್ಯುತ್​ ಮೀಟರ್​ಗಳನ್ನು ತೆಗೆದುಹಾಕಿ ಅದರ ಬದಲು ಮುಂಗಡ ಪಾವತಿ ಸ್ಮಾರ್ಟ್​ ವಿದ್ಯುತ್​ ಮೀಟರ್​ (ಸ್ಮಾರ್ಟ್ ಪ್ರೀಪೇಯ್ಡ್​)ಗಳನ್ನು ಅಳವಡಿಸಬೇಕು. ವಿದ್ಯುತ್ ಸರಬರಾಜುದಾರರ ಗ್ರಾಹಕರಿಗೇ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು. ಈ ಬಗ್ಗೆ ಆಯಾ ರಾಜ್ಯಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು. ಈ ಕೆಲಸ ಇನ್ನು ಮೂರುವರ್ಷಗಳಲ್ಲಿ ಪೂರ್ಣಗೊಳ್ಳಬೇಕು ಎಂದು ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ನೈಸರ್ಗಿಕ ಅನಿಲ ಪೈಪ್‌ಲೈನ್ ಗ್ರಿಡ್ ಅನ್ನು 16,000 ಕಿ.ಮೀ.ಯಿಂದ 27,000 ಕಿ.ಮೀ.ಗೆ ವಿಸ್ತರಿಸಲಾಗುವುದು. ಹಾಗೇ ನೈಸರ್ಗಿಕ ಅನಿಲಕ್ಕೆ ಪಾರದರ್ಶಕ ಬೆಲೆ ನಿಗದಿಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.(ಪಿಟಿಐ​)