Nitish Kumar: ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತನ್ನ ಇಚ್ಛೆಯ ಉದ್ಯಮ ಆರಂಭಿಸಲು ಆರ್ಥಿಕ ನೆರವು ನೀಡುವ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ (ಆಗಸ್ಟ್ 29) ಘೋಷಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯ ಮೂಲಕ ಹೊಸ ಯೋಜನೆಯನ್ನು ಪರಿಚಯಿಸಿರುವ ನಿತೀಶ್, 2005 ರಲ್ಲಿ ನಮ್ಮ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದ್ದು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
ಮಹಿಳೆಯರು ಕಠಿಣ ಪರಿಶ್ರಮದ ಮೂಲಕ ಬಿಹಾರದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುವುದರೊಂದಿಗೆ ಅವರ ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿದ್ದಾರೆ ಎಂದರು. ರಾಜ್ಯದ ಅಭಿವೃದ್ದಿಗೆ ಶ್ರಮಿಸಿರುವ ಮಹಿಳೆಯರ ಹಿತದೃಷ್ಟಿಯಿಂದ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಇದು ಅನೇಕ ವರ್ಷಗಳ ಕಾಲ ಬಿಹಾರದ ಹೆಣ್ಣುಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ನಗರಾಭಿವೃದ್ಧಿ ಮತ್ತು ವಸತಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಅರ್ಜಿ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಯೋಜನೆಯ ಅನುಷ್ಠಾನವು ಮಹಿಳೆಯರ ಸ್ಥಾನವನ್ನು ಮತ್ತಷ್ಟು ಬಲಪಡಿಸುವುದಲ್ಲದೆ, ಬಿಹಾರದ ಜನರು ಉದ್ಯೋಗಕ್ಕಾಗಿ ರಾಜ್ಯವನ್ನು ತೊರೆದು ಬೇರೆ ರಾಜ್ಯಕ್ಕೆ ವಲಸೆ ಹೋಗುವುದನ್ನು ತಪ್ಪಿಸುವ ವಿಶ್ವಾಸವಿದೆ ಎಂದು ನಿತೀಶ್ಕುಮಾರ್ ಹೇಳಿದರು.
ಈ ಯೋಜನೆ ಕುಟುಂಬದ ಒಬ್ಬ ಮಹಿಳೆಗೆ ಆರಂಭಿಕ ಕಂತಾಗಿ 10,000 ರೂ.ಗಳನ್ನು ನೀಡುತ್ತದೆ, ಈ ಕಾರ್ಯ ಸೆಪ್ಟೆಂಬರ್‌ನಿಂದ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಆರು ತಿಂಗಳ ಉದ್ಯೋಗದ ಬಳಿಕ, ಮೌಲ್ಯಮಾಪನವನ್ನು ನಡೆಸಿ ಅಗತ್ಯವಿದ್ದರೆ 2 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಸಹಾಯಧನವನ್ನು ನೀಡಲಾಗುತ್ತದೆ. ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕಾಗಿ ರಾಜ್ಯಾದ್ಯಂತ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)