ಕರೊನಾದಿಂದ ತತ್ತರಿಸಿರುವ ರೈತರಿಗೆ ಕೇಂದ್ರ, ರಾಜ್ಯ ಸರ್ಕಾರ ಯೋಜನೆ ಪ್ರಕಟಿಸುವ ಮೂಲಕ ‘ಶುಭ ಶುಕ್ರವಾರ’ವಾಗಿ ಪರಿಣಮಿಸಿತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಘೋಷಣೆ ಹೊರಡಿಸಿದರೆ ಇತ್ತ ಸಿಎಂ ಯಡಿಯೂರಪ್ಪ ಮೆಕ್ಕೆಜೋಳ ಬೆಳೆಗಾರರ ಜತೆಗೆ ಆಶಾ ಕಾರ್ಯಕರ್ತೆಯರಿಗೂ ಕೊಡುಗೆ ನೀಡಿದ್ದಾರೆ.
ಇನ್ನು ಆಪರೇಷನ್ ಗ್ರೀನ್
ಕರೊನಾ ಲಾಕ್ಡೌನ್ ತಂದೊಡ್ಡಿರುವ ಆರ್ಥಿಕ ಬಿಕ್ಕಟ್ಟು ಬಗೆಹರಿಸುವ ಯತ್ನವಾಗಿ ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ನ 3ನೇ ಚರಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 11 ಉಪಕ್ರಮ ಘೋಷಿಸಿದ್ದಾರೆ. ಇದರಲ್ಲಿ 8 ಅಂಶ ಕೃಷಿ ಮೂಲಸೌಕರ್ಯ, ಸರಕು ಸಾಗಣೆ ವ್ಯವಸ್ಥೆ ಉತ್ತಮಪಡಿಸುವುದಕ್ಕೆ ಸಂಬಂಧಿಸಿದ್ದಾದರೆ ಉಳಿದ 3 ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆ ಒಳಗೊಂಡಿದೆ.
ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್
ಕಿರು ಆಹಾರ ಉದ್ದಿಮೆಗಳಿಗೆ -ಠಿ;10 ಸಾವಿರ ಕೋಟಿ, ರಾಗಿಗೆ ಗ್ಲೋಬಲ್ ಬ್ರಾ್ಯಂಡಿಂಗ್ ಘೋಷಣೆ ಜತೆಗೆ ಕರ್ನಾಟಕದಲ್ಲಿ ರಾಗಿ ಕ್ಲಸ್ಟರ್ ಆರಂಭಿಸುವ ನಿರ್ಧಾರ ಪ್ರಕಟ.
ಔಷಧೀಯ ಸಸ್ಯಕ್ಕೆ ಜೀವ
ನಾಲ್ಕು ಸಾವಿರ ಕೋಟಿ ರೂಪಾಯಿ ಸಿಕ್ಕಿದೆ. ಹತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗಿಡಮೂಲಿಕೆ ಬೆಳೆ ಬೆಳೆಸಲು ಆದ್ಯತೆ ನೀಡಲಾಗಿದೆ.
ಮೀನುಗಾರರಿಗೆ ಬಂಪರ್
20 ಸಾವಿರ ಕೋಟಿ ರೂ. ಸಿಕ್ಕಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ, ಮೀನುಗಾರಿಕೆ ಬಂದರು, ಶೀತಲೀಕರಣ ವ್ಯವಸ್ಥೆ, ಮೀನು ಮಾರುಕಟ್ಟೆ, ಚಟುವಟಿಕೆಗೆ ಹಣ ಬಳಕೆ ಆಗಲಿದೆ.
ಜೇನು ಸಾಕಣೆಗೆ ಒತ್ತು
500 ಕೋಟಿ ರೂ. ಘೋಷಣೆ, ಪರಾಗಸ್ಪರ್ಶ ಪ್ರಕ್ರಿಯೆಗೆ ಅಗತ್ಯವಾದ ಜೇನು ಸಾಕಣೆ ಅಭಿವೃದ್ಧಿಗಿನ್ನು ಸಿಗಲಿದೆ ಸಂಪೂರ್ಣ ಆದ್ಯತೆ.
ಹಸಿರು ಕ್ರಾಂತಿಗೆ 500 ಕೋಟಿ ರೂ.
ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆಗೆ ಇದ್ದ ‘ಆಪರೇ ಷನ್ ಗ್ರೀನ್’ ಯೋಜನೆ ಎಲ್ಲ ಬೆಳೆಗೂ ವಿಸ್ತರಣೆ. ಹೆಚ್ಚುವರಿ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸುವ ವೆಚ್ಚದಲ್ಲಿ ಶೇ.50 ಸಬ್ಸಿಡಿ ಸಿಗಲಿದೆ.
ಹೈನುಗಾರಿಕೆಗೆ ಆದ್ಯತೆ
15,000 ಕೋಟಿ ರೂ.ಗಳಲ್ಲಿ ಪಶು ಸಂಗೋಪನೆ ಮೂಲ ಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ, ಡೇರಿ ಸಂಸ್ಕರಣ ಘಟಕಗಳಲ್ಲಿ ಖಾಸಗಿಗೆ ಅವಕಾಶ.