ನ್ಯೂಸ್

ಗುಂಡು ಹಾರಿಸಿ ರೌಡಿ ಸೆರೆ

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಅಪರಾಧ ಪ್ರಕರಣ ಸಂಬಂಧ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ್ದ ರೌಡಿಯನ್ನು ಗಾಳಿಯಲ್ಲಿ ಗುಂಡು ಹಾರಿಸಿ ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.

ಶಿವಾನಂದನಗರ ನಿವಾಸಿ ಕಿರಣ್ ಅಲಿಯಾಸ್ ಸೈಕೋ (28)ಬಂಧಿತ ರೌಡಿ. ಶುಕ್ರವಾರ ಮುಂಜಾನೆ 4.30ರಲ್ಲಿ ನ್ಯೂತಿಪ್ಪಸಂದ್ರದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ಕಾನ್‌ಸ್ಟೆಬಲ್‌ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಕ್ಕೆ ಅಪಾಯ ಇಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಚ್‌ಎಎಲ್ ಠಾಣೆ ರೌಡಿಶೀಟರ್ ಕಿರಣ್, ಇತ್ತೀಚೆಗೆ ಮೊಬೈಲ್ ರಾಬರಿ ಎಸಗಿದ್ದ. ಕೋರ್ಟ್ ವಿಚಾರಣೆಗೂ ಹಾಜರಾಗದೆ ತಲೆಮರೆಸಿಕೊಂಡಿದ್ದ. ಬಂಧನಕ್ಕೆ ಕೋರ್ಟ್ ವಾರಂಟ್ ಜಾರಿ ಮಾಡಿತ್ತು. ಗುರುವಾರ ರಾತ್ರಿ 12.30ಕ್ಕೆ ಆರೋಪಿ ಕಿರಣ್ ಮನೆಯಲ್ಲೇ ಇರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಕಾನ್‌ಸ್ಟೆಬಲ್‌ಗಳು ಆತನ ಮನೆಗೆ ಹೋದಾಗ ಆರೋಪಿ ಏಕಾಏಕಿ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಾಯಾಳು ಕಾನ್‌ಸ್ಟೆಬಲ್‌ಗಳು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಚ್‌ಎಎಲ್ ಇನ್‌ಸ್ಪೆಕ್ಟರ್ ಅಜರುದ್ದೀನ್ ನೇತೃತ್ವದ ತಂಡ ಆರೋಪಿ ಕಿರಣ್ ಬಂಧನಕ್ಕೆ ಬಲೆಬೀಸಿತ್ತು. ಮುಂಜಾನೆ 4.30ರಲ್ಲಿ ನ್ಯೂ ತಿಪ್ಪಸಂದ್ರದ ಟೀ ಅಂಗಡಿ ಬಳಿ ಕಿರಣ್ ಇರುವ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ವಶಕ್ಕೆ ಪಡೆಯಲು ಹೋದಾಗ ಮತ್ತೆ ಡ್ರ್ಯಾಗರ್ ತೆಗೆದು ಹಲ್ಲೆಗೆ ಮುಂದಾಗಿದ್ದ. ಆತ್ಮರಕ್ಷಣೆ ಸಲುವಾಗಿ ಇನ್‌ಸ್ಪೆಕ್ಟರ್ ಅಜುರುದ್ದೀನ್, ಸರ್ವಿಸ್ ಪಿಸ್ತೂಲ್‌ನಿಂದ ಗಾಳಿಯಲ್ಲಿ 1 ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದರು.

ಆದರೂ ಪೊಲೀಸರ ಮೇಲೆ ಆರೋಪಿ ಎರಗಲು ಮುಂದಾದಾಗ ಸುತ್ತುವರೆದು ಕಿರಣ್‌ನ್ನು ಬಂಧಿಸಿದ್ದಾರೆ. ಸದ್ಯ ಎಚ್‌ಎಎಲ್ ಠಾಣೆಯಲ್ಲಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಕಿರಣ್ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಜೀವನಭೀಮಾನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.