ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ನಗರದಾದ್ಯಂತ ಜನರ ಓಡಾಟ ಮತ್ತು ಚಲನವಲನಗಳ ಮೇಲೆ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇಂತಹ ಪರಿಸ್ಥಿತಿಯ ನಡುವೆಯೂ ಬೆಂಗಳೂರಿನಲ್ಲಿ ಶನಿವಾರ ತಡರಾತ್ರಿ ರೌಡಿಯೊಬ್ಬನ ಮರ್ಡರ್ ನಡೆದಿದೆ.
ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಬುಜ್ಜಿ (30) ಹತ್ಯೆಯಾದವನು. ದುಷ್ಕರ್ಮಿಗಳು ಕೆ.ಜಿ. ಹಳ್ಳಿಯ ನ್ಯೂ ಬಾಗಲೂರು ಲೇಔಟ್‌ನಲ್ಲಿರುವ ಬುಜ್ಜಿಯ ಮನೆ ಬಳಿಯೇ ಬಂದು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಂದಿದ್ದಾರೆ. ಹತ್ಯೆ ನಡೆಸಿದ ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಮತ್ತೊಬ್ಬ ರೌಡಿ ಡ್ಯಾನಿಯಲ್ ಸಹಚರರಿಂದ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈಗ ಹತ್ಯೆಯಾದ ರೌಡಿಶೀಟರ್ ಬುಜ್ಜಿ ಅಲಿಯಾಸ್ ಬುಜ್ಜು ಈ ಹಿಂದೆ ಡ್ಯಾನಿಯಲ್ ಸಂಬಂಧಿಯಾದ ಇನ್ನೊಬ್ಬ ರೌಡಿ ಸ್ಟಾಲಿನ್‌ನ ಕೊಲೆಯಲ್ಲಿ ಭಾಗಿಯಾಗಿದ್ದ ಎನ್ನುವ ಆರೋಪವಿತ್ತು. ಸ್ಟಾಲಿನ್ ಕೊಲೆಯ ಬಳಿಕ ಆತನ ಸಹಚರರು ಬುಜ್ಜು ಸಹೋದರ ವಿನೋದ್‌ನನ್ನು ಹತ್ಯೆ ಮಾಡಿದ್ದರು. ಬಳಿಕ ಎರಡೂ ಕಡೆಯ ಒಬ್ಬೊಬ್ಬರ ಕೊಲೆಯಾಗಿದೆ ಎಂದು ಸಂಧಾನ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಅದರ ಬೆನ್ನಲ್ಲೇ ಈಗ ಬುಜ್ಜುವಿನ ಕೊಲೆ ನಡೆದಿದೆ.