ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಮನೆಯ ಸಮೀಪವೇ ರೌಡಿಯೊಬ್ಬನನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಜಯಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ(೩೩) ಕೊಲೆಯಾದ ರೌಡಿ.
ಹನುಮಜಯಂತಿ ಪ್ರಯುಕ್ತ ಭಾನುವಾರ ಲಕ್ಕಸಂದ್ರ ಬಸ್ ನಿಲ್ದಾಣದ ಸಮೀಪದ ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಭಾಗಿಯಾಗಿದ್ದ. ಸಂಜೆ ೬.೪೫ರ ಸುಮಾರಿಗೆ ಸುಮಾರು ಐದು ಮಂದಿ ಏಕಾಏಕಿ ಜಯಪ್ರಕಾಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ತಪ್ಪಿಸಿಕೊಂಡು ಓಡಿದ ಜಯಪ್ರಕಾಶ್ ಸಮೀಪದಲ್ಲೇ ಇದ್ದ ವಿಜಯಸಾಗರ ಹೋಟೆಲ್‌ಗೆ ನುಗ್ಗಿದ್ದಾನೆ. ಅಷ್ಟರಲ್ಲಿ ಬೆನ್ನಟ್ಟಿ ಬಂದ ದುಷ್ಕರ್ಮಿಗಳು ಹೋಟೆಲ್‌ನೊಳಗೆ ನುಗ್ಗಿ ಜಯಪ್ರಕಾಶ್‌ನನ್ನು ಮನಸೋಇಚ್ಚೇ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.
ಐದು ತಂಡ ರಚನೆ:
ಘಟನಾ ಸ್ಥಳಕ್ಕೆ ಆಡುಗೋಡಿ ಪೊಲೀಸರು, ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಜಯಪ್ರಕಾಶ್ ೨೦೦೬ರಲ್ಲಿ ಹತ್ಯೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಬಳಿಕ ಆಟೋ ಓಡಿಸಿಕೊಂಡಿದ್ದ. ಹಳೇಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರ ಐದು ತಂಡ ರಚಿಸಲಾಗಿದೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿದ್ದಾರೆ.
ಸಂಜೆ ೬.೪೦ ಸುಮಾರಿಗೆ ಈ ಘಟನೆ ನಡೆದಿದೆ. ಜಯಪ್ರಕಾಶ್ ಎಂಬಾತ ಸಂಜೆ ಅನ್ನದಾನ ಕಾರ್ಯಕ್ರಮ ಮಾಡುತ್ತಿದ್ದ.ಅಲ್ಲಿಂದ ಓಡಿಸ್ಕೊಂಡು ಬಂದು ಹೋಟೆಲ್ ಒಳಗಡೆ ಹತ್ಯೆ ಮಾಡಿದಾರೆ.
ನಾಲ್ಕರಿಂದ ಐದು ಜನ ಆರೋಪಿಗಳು ಕೃತ್ಯ ಎಸಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ಇದೆ. ಐದು ತಂಡ ರಚಿಸಿ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ.
ಸಿ.ಕೆ ಬಾಬ, ಆಗ್ನೇಯ ವಿಭಾಗದ ಡಿಸಿಪಿ