ನ್ಯೂಸ್

ಸಾಲು ಸಾಲು ಎಲೆಕ್ಷನ್ ಸವಾಲು: ಮುಂದಿದೆ ಪರಿಷತ್​, ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ!

Webdesk - Mallikarjun K R

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಇನ್ನೇನು ವಾರದಲ್ಲಿ ಲೋಕಸಭೆ ಚುನಾವಣೆ ಮುಗಿದರೆ ಸಾಕಪ್ಪ.. ಎಂದು ರಾಜಕೀಯ ಪಕ್ಷಗಳ ನೇತಾರರು ನಿಟ್ಟುಸಿರು ಬಿಡುವಂತಿಲ್ಲ. ಕಾರಣ ವಿಧಾನಪರಿಷತ್​ನ ಆರು ಸ್ಥಾನಗಳ ಜತೆಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಸಹಿತ ಒಂದಾದ ಮೇಲೆ ಒಂದರಂತೆ ಚುನಾವಣೆ ಎದುರಾಗಲಿದೆ. ಹೀಗಾಗಿ ವಿಶ್ರಾಂತಿಯನ್ನು ಬದಿಗಿಟ್ಟು ರಾಜಕೀಯ ಪಕ್ಷಗಳ ಮುಖಂಡರು ಮತಕಹಳೆ ಮೊಳಗಿಸಬೇಕಿದೆ.

ಜೂನ್ ಬಳಿಕ ಇನ್ನೂ ಐದಾರು ತಿಂಗಳು ಅಂದರೆ ಅಕ್ಟೋಬರ್, ನವೆಂಬರ್​ವರೆಗೂ ರಾಜ್ಯದಲ್ಲಿ ಚುನಾವಣೆ ಕಾವಿರಲಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವುದಷ್ಟೇ ರಾಜಕೀಯ ಪಕ್ಷಗಳ ಸಾಮರ್ಥ್ಯ ಪರೀಕ್ಷೆಯಾಗಿ ಉಳಿಯುವುದಿಲ್ಲ. ಪಕ್ಷ ಸಂಘಟನೆಯ ಬಲವರ್ಧನೆ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲುವುದು ಮತ್ತು ಅಧಿಕಾರ ಹಿಡಿಯುವುದೂ ಮುಖ್ಯವಾಗುತ್ತದೆ. ಸ್ಥಳೀಯ ನಾಯಕತ್ವ ಬೆಳೆಸುವುದಕ್ಕೆ ಈ ಚುನಾವಣೆ ಮೂರು ಪಕ್ಷಗಳಿಗೆ ಮಹತ್ವದ್ದಾಗಿದೆ ಎಂಬುದು ವಿಶೇಷ. ಪ್ರಮುಖ ಸಂಗತಿ ಎಂದರೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿಗೆ ಜನಪ್ರತಿನಿಧಿಗಳ ಅಧಿಕಾರ ಇಲ್ಲದೆ 3-4 ವರ್ಷ ಕಳೆದು ಹೋಗಿದೆ. 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಈಗಲೂ ಕುಂಟು ನೆಪ ಹೇಳಿ ಚುನಾವಣೆಗಳನ್ನು ಮುಂದೂಡಿದರೆ ಸಂವಿಧಾನದ ಬಗ್ಗೆ ಉದ್ದುದ್ದ ಪಾಠ ಮಾಡುವ ಸರ್ಕಾರ ತಾನೇ ನಿಯಮ ಉಲ್ಲಂಘಿಸಿದ ಅಪವಾದ ಹೊರಬೇಕಾಗುತ್ತದೆ. ಬಿಬಿಎಂಪಿಯೂ ತ್ರಿಶಂಕು!: 2020ರ ಸೆ.10ರಂದು (ಮೂರು ಮುಕ್ಕಾಲು ವರ್ಷ) ಬೃಹತ್ ಬೆಂಗಳೂರು ಚುನಾಯಿತ ಅವಧಿ ಮುಗಿದಿದೆ. ಬಳಿಕ ಕ್ಷೇತ್ರ ಪುನರ್ ವಿಂಗಡಣೆ ನಡೆದು ಹೊಸ ವಾರ್ಡ್​ಗಳ ರಚನೆಯಾಗಿದೆ. ಆದರೆ ಬಿಬಿಎಂಪಿಯನ್ನು ತ್ರಿಭಜನೆ ಮಾಡುವ ಉದ್ದೇಶ ಕಾಂಗ್ರೆಸ್​ನದ್ದಾಗಿದೆ. ಆ ನಿರ್ಧಾರಕ್ಕೆ ಜೋತುಬಿದ್ದರೆ ಮತ್ತೆ ಆರು ತಿಂಗಳು ಚುನಾವಣೆ ಮುಂದಕ್ಕೆ ಹೋಗಬಹುದು.

ರಾಜ್ಯ ಸರ್ಕಾರಕ್ಕೆ ಅಗ್ನಿಪರೀಕ್ಷೆ: ಸಿದ್ದರಾಮಯ್ಯ ಅಧಿಕಾರ ಹಿಡಿದು ಒಂದು ವರ್ಷ ಸಮೀಪಿಸಿದೆ. ಮೇ 20ರಂದು ಅವರು ಸಿಎಂ ಆಗಿ ಭರ್ತಿ ಒಂದು ವರ್ಷ. ಅವರ ಸರ್ಕಾರದ ಬಗ್ಗೆ ಜನರ ನಾಡಿಮಿಡಿತ ಏನೆಂದು ಅರಿಯಲು ಈ ಸಾಲು ಸಾಲು ಚುನಾವಣೆಗಳೇ ಅಗ್ನಿಪರೀಕ್ಷೆ . ಲೋಕಸಭೆ ಚುನಾವಣೆಯ ಸೋಲುಗೆಲುವಿನ ಕ್ರೆಡಿಟ್ ಪಡೆದುಕೊಳ್ಳುವುದು ಬೇರೆ ಮಾತು, ಸ್ಥಳೀಯ ಸಂಸ್ಥೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಮೂಲಕ ಜನ ನಮ್ಮ ಪರವಾಗಿದ್ದಾರೆಂದು ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ.

ನೀತಿ ಸಂಹಿತೆ : ಚುನಾವಣೆ ವ್ಯಾಪ್ತಿಗೆ ಸೀಮಿತವಾಗಿ ನೀತಿ ಸಂಹಿತೆ ಅನ್ವಯವಾಗುತ್ತದೆ. ಆದರೆ, ಮತದಾರರ ಮೇಲೆ ಪರಿಣಾಮ ಬೀರಬಹು ದಾದ ತೀರ್ಮಾನ ಮಾಡಲು ಸರ್ಕಾರಕ್ಕೆ ಅವಕಾಶ ಇರುವುದಿಲ್ಲ. ಈ ಕಾರಣಕ್ಕೆ ಆಡಳಿತ ಯಂತ್ರ ಉರುಳುವುದು ಅಷ್ಟು ಸಲೀಸಲ್ಲ.

ಜಿ.ಪಂ ಗ್ರಹಣಕ್ಕೆ 3 ವರ್ಷ 2021 ಮೇನಲ್ಲಿ ರಾಜ್ಯದ 30 (ವಿಜಯನಗರ ಈಗ ಹೆಚ್ಚುವರಿ) ಜಿಲ್ಲಾ ಪಂಚಾಯಿತಿಗಳ ಅವಧಿ ಮುಕ್ತಾಯವಾಗಿದೆ. ಅಂದರೆ 3 ವರ್ಷ ಜನಪ್ರತಿನಿಧಿಗಳ ಆಡಳಿತ ಕಂಡಿಲ್ಲ. ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆಗಾಗಿ ಮಾಡಿದ್ದ ಸಮಿತಿ ವರದಿ ಕೊಟ್ಟಿದ್ದು ಅದಾಗಲೇ ಅಂಗೀಕಾರವಾಗಿದೆ. ಆದರೆ ಪುನರ್ ವಿಂಗಡಣೆ ಬಗ್ಗೆ ಆಕ್ಷೇಪಣೆಯೂ ಇದೆ.

ಪಕ್ಷಗಳಿಗೆ ಪ್ರತಿಷ್ಠೆ

ಕಾಂಗ್ರೆಸ್: ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಆಡಳಿತಾರೂಢ ಪಕ್ಷಕ್ಕೆ ಪ್ರತಿ ಚುನಾವಣೆಯೂ ಪ್ರತಿಷ್ಠೆಯ ವಿಷಯ. ಒಂದೊಮ್ಮೆ ಹಿನ್ನಡೆ ಉಂಟಾದರೆ ಬೇರೆ ಸಂದೇಶ ಹೋಗಲಿದೆ. ಭವಿಷ್ಯದ ರಾಜಕೀಯ ಸವಾಲಾಗಿದೆ. ಈ ಕಾರಣಕ್ಕೆ ಈ ಎಲ್ಲ ಚುನಾವಣೆಗಳೂ ಕಾಂಗ್ರೆಸ್ ಪಾಲಿಗೆ ಅತಿಮುಖ್ಯ.

ಬಿಜೆಪಿ: ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಸೋಲು ಕಂಡ ಬಳಿಕ ರಾಜ್ಯದಲ್ಲಿ ಪುನಃ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳಲು ಜಿ.ಪಂ, ತಾಪಂ, ಬಿಬಿಎಂಪಿ ಚುನಾವಣೆ ಅತಿ ಮುಖ್ಯ. ಹಾಗೆಯೇ ಲೋಕಸಭೆ ಚುನಾವಣೆ ಮೋದಿ ಫ್ಯಾಕ್ಟರ್ ಮೇಲೆ ನಡೆಯುವ ಕಾರಣ ಸ್ವಸಾಮರ್ಥ್ಯ ಸಾಬೀತುಪಡಿಸುವ ಅವಕಾಶ.

ಜೆಡಿಎಸ್: ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ದಳಪತಿಗಳು ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಸುವರ್ಣಾವಕಾಶ. ಬಿಜೆಪಿ ಹಾಗೂ ಕಾಂಗ್ರೆಸ್​ನಂತೆಯೆ ತನ್ನದೇ ಆದ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳನ್ನು ಗೆಲ್ಲಿಸಿಕೊಂಡು ತನ್ನ ವ್ಯಾಪ್ತಿ ರಾಜ್ಯದ ಉದ್ದಗಲಕ್ಕೂ ಇದೆ ಎಂಬುದನ್ನು ತೋರಿಸುವುದಕ್ಕೆ ಸುಸಮಯ.

ಜೂನ್ 3ಕ್ಕೆ ಪರಿಷತ್ ಮತ ಸಮರ

ಬೆಂಗಳೂರು: ವಿಧಾನ ಪರಿಷತ್ತಿಗೆ ಸದ್ಯದಲ್ಲೇ ಖಾಲಿ ಆಗಲಿರುವ 6 ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದೆ. 3 ಪದವೀಧರರ ಕ್ಷೇತ್ರ ಹಾಗೂ 3 ಶಿಕ್ಷಕರ ಕ್ಷೇತ್ರಗಳಿಗೆ ಜೂ.3 ರಂದು ಚುನಾವಣೆ ನಡೆಯಲಿದೆ. ಈಶಾನ್ಯ ಪದವೀಧರರ ಕ್ಷೇತ್ರ ಡಾ.ಚಂದ್ರಶೇಖರ ಬಿ. ಪಾಟೀಲ್, ನೈರುತ್ಯ ಪದವೀಧರರ ಕ್ಷೇತ್ರ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರರ ಕ್ಷೇತ್ರ ಎ. ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರ ವೈ.ಎ.ನಾರಾಯಣಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರ ಎಸ್.ಎಲ್.ಭೋಜೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದ ಮರಿತಿಬ್ಬೇಗೌಡ ಅವರ ಅಧಿಕಾರಾವಧಿ ಜೂ.21ಕ್ಕೆ ಮುಕ್ತಾಯಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆ ಮಾಡಲಾಗಿದೆ. ಚುನಾವಣೆ ನಡೆಯುವ ಆರು ಸ್ಥಾನಗಳ ಪೈಕಿ ಮೂರರಲ್ಲಿ ಬಿಜೆಪಿ, ಎರಡರಲ್ಲಿ ಜೆಡಿಎಸ್ ಹಾಗೂ ಒಂದರಲ್ಲಿ ಕಾಂಗ್ರೆಸ್ ಜಯಿಸಿತ್ತು.

. ಅಧಿಸೂಚನೆ ಪ್ರಕಟಿಸುವ ದಿನ: ಮೇ 9. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಮೇ 16. ನಾಮಪತ್ರ ಪರಿಶೀಲನೆ: ಮೇ 17. ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಮೇ 20. ಮತದಾನ ದಿನ: ಜೂ.3. ಮತ ಎಣಿಕೆ: ಜೂ.6. ಮತದಾನದ ಸಮಯ: ಬೆಳಗ್ಗೆ 8 ರಿಂದ ಸಂಜೆ 4