ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಬರುವ ಮುನ್ನವೇ ಶಿವಮೊಗ್ಗ ಸುಂದರವಾಗಿತ್ತು. ಈಗ ಅವೈಜ್ಞಾನಿಕ ಕಾಮಗಾರಿಯಿಂದ ನಗರದ ರಸ್ತೆಗಳಲ್ಲಿ ಸಂಚಾರವೇ ಅಪಾಯ ಎನ್ನುವ ಸ್ಥಿತಿಯಿದೆ. ಇಂಜಿನಿಯರ್‌ಗಳು ಸರಿಯಾಗಿ ಕೆಲಸ ಮಾಡಿಲ್ಲ. ಗುತ್ತಿಗೆದಾರರ ಪರವಾದ ಯೋಜನೆಯಿದು…ಹೀಗೆ ಸಾರ್ವಜನಿಕರು ಸಾಲು ಸಾಲು ದೂರುಗಳೊಂದಿಗೆ ಆಕ್ರೋಶ ಹೊರಹಾಕುತ್ತಿದ್ದರೆ ಅಧಿಕಾರಿಗಳು ಏನೂ ಮಾತನಾಡದ ಸ್ಥಿತಿಯಲ್ಲಿದ್ದರು.
ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತ ಸಾರ್ವಜನಿಕರ ದೂರು ಸ್ವೀಕಾರಕ್ಕೆಂದು ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಭೆಗೆ ಸುಮಾರು 150 ನಾಗರಿಕರು ಆಗಮಿಸಿದ್ದರು. ಇಷ್ಟೇ ಮಂದಿ ಸತತ ಮೂರು ತಾಸು ಅಧಿಕಾರಿಗಳನ್ನು ಇನ್ನಿಲ್ಲದಂತೆ ಕಾಡಿದರು. ಇಂಜಿನಿಯರ್‌ಗಳು ಸೂಕ್ತ ಉತ್ತರಕ್ಕಾಗಿ ತಡಕಾಡಬೇಕಾಯಿತು.
ಲಕ್ಷ್ಮೀ ಟಾಕೀಸ್ ವೃತ್ತದಿಂದ ಸೈಕಲ್ ಟ್ರಾೃಕ್ ನಿರ್ಮಿಸಲಾಗಿದೆ. ಬಹುತೇಕ ಕಡೆಗಳಲ್ಲಿ ಸೈಕಲ್ ಚಲಿಸುವಷ್ಟು ಜಾಗವೂ ಇಲ್ಲ. ಹಲವು ಕಡೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಭೂಗತ ಕೇಬಲ್ ಅಳವಡಿಕೆಯಂತೂ ನಾಗರಿಕರ ಜೀವಕ್ಕೆ ಅಪಾಯ ತಂದೊಡ್ಡುವ ಆತಂಕವಿದೆ ಎಂದು ದೂರಿದರು.
ಯಾವುದಾದರೂ ಕಾಮಗಾರಿ ಮಾಡಿದರೆ 25-30 ವರ್ಷ ಅದು ಬಾಳಿಕೆ ಬರಬೇಕು. ಆದರೆ ರಸ್ತೆಗಳನ್ನು ದಿನಕ್ಕೊಂಡು ಕಡೆ ಅಗೆಯಲಾಗುತ್ತದೆ. ಎಲ್ಲಿ ನೋಡಿದರೂ ಹೊಂಡದ ಸುತ್ತ ಬ್ಯಾರಿಕೇಡ್‌ಗಳೇ ಕಾಣುತ್ತವೆ. ಬೇರೆ ಊರುಗಳಿಂದ ಶಿವಮೊಗ್ಗಕ್ಕ ಬರುವ ಜನರು ಈ ನಗರದ ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸಬಹುದೆಂಬ ಯೋಚನೆಯೇ ಅಧಿಕಾರಿಗಳಿಗಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.
ವಿವರಣೆ ನೀಡಿದ ಎಂಡಿ:ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹಗಳ ಪೈಕಿ 15ನ್ನು ಮಾತ್ರ ಪಾಲಿಕೆಗೆ ಹಸ್ತಾಂತರ ಮಾಡಿಕೊಂಡು ಜನರಿಗೆ ಉಚಿತವಾಗಿ ಸೌಲಭ್ಯ ಒದಗಿಸಲಾಗುತ್ತಿದೆ. ಇ-ಟಾಯ್ಲೆಟ್‌ಗಳನ್ನು ಇನ್ನೂ ಹಸ್ತಾಂತರ ಮಾಡಿಕೊಂಡಿಲ್ಲ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಮಾಯಣ್ಣ ಗೌಡ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಹಲವು ತಿಂಗಳಿನಿಂದ ನಿರಂತರವಾಗಿ ಸಾರ್ವಜನಿಕರಿಂದ ವಾಟ್ಸಪ್, ಇ-ಮೇಲ್, ಪತ್ರಗಳ ಮೂಲಕ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ. ಬಹುಪಾಲು ದೂರುಗಳು ಭೂಗತ ಕೇಬಲ್ ಅಳವಡಿಕೆ ಕಾಮಗಾರಿಗೆ ಸಂಬಂಧಿಸಿದ್ದಾಗಿವೆ. ಇನ್ನು 10 ದಿನಗಳ ದೂರುಗಳ ವಿಂಗಡಣೆ ಕಾರ್ಯ ನಡೆಯಲಿದೆ. ಬಳಿಕ ಸಮಸ್ಯೆಗಳ ಪರಿಹಾರಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಕಾರ್ಯಪಾಲಕ ಅಭಿಯಂತರರಾದ ಕೃಷ್ಣಪ್ಪ, ವಿಜಯಕುಮಾರ್, ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ವೀರೇಂದ್ರ, ಕೆಯುಡಬ್ಲುೃಎಸ್ ಕಾರ್ಯಪಾಲಕ ಅಭಿಯಂತರ ಸಿದ್ದಣ ಇತರರು ಭಾಗವಹಿಸಿದ್ದರು.