Swiggy Instamart Rotten Eggs: ಆನ್‌ಲೈನ್‌ನಲ್ಲಿ ದಿನಸಿ ಹಾಗೂ ತಾಜಾ ಆಹಾರ ಉತ್ಪನ್ನಗಳನ್ನು ಆರ್ಡರ್ ಮಾಡುವ ಗ್ರಾಹಕರಿಗೆ ಗುಣಮಟ್ಟದ ಬಗ್ಗೆ ಮತ್ತೆ ಪ್ರಶ್ನೆಗಳು ಎದುರಾಗಿವೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಕೊಳೆತ ಮೊಟ್ಟೆಗಳು ಡೆಲಿವರಿಯಾಗಿವೆ ಎಂದು ಆರೋಪಿಸಿ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ.
ನ್ಯೂಸ್18 ಇಂಡಿಯಾ ಕನ್ಸಲ್ಟಿಂಗ್ ಎಡಿಟರ್ ಸುಶಾಂತ್ ಸಿನ್ಹಾ ಅವರು ಎಕ್ಸ್‌ನಲ್ಲಿ ಮೊಟ್ಟೆಗಳ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಡಾ. ಹೆನ್ ಮೊಟ್ಟೆಗಳ ಟ್ರೇ ಆರ್ಡರ್ ಮಾಡಿದ್ದು, ಹಲವು ಮೊಟ್ಟೆಗಳು ಹಾಳಾಗಿದ್ದವು ಎಂದು ಆರೋಪಿಸಿದ್ದಾರೆ. ವಿವಿಧ ಶುಲ್ಕ ಪಾವತಿಸಿದರೂ ಇಂತಹ ಉತ್ಪನ್ನಗಳು ಗ್ರಾಹಕರಿಗೆ ತಲುಪುತ್ತಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕೆಲ ಗ್ರಾಹಕರು ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಮೊಟ್ಟೆ ಹಾಗೂ ಆಹಾರ ಉತ್ಪನ್ನಗಳ ಗುಣಮಟ್ಟ ಕಳಪೆಯಾಗಿತ್ತು ಎಂದು ಆರೋಪಿಸಿದ್ದಾರೆ. ಮತ್ತೊಬ್ಬರು ಅಮೆಜಾನ್ ನೌನಲ್ಲಿ ಡಾ. ಹೆನ್ ಮೊಟ್ಟೆ ಆರ್ಡರ್ ಮಾಡಿದಾಗಲೂ ಇದೇ ಸಮಸ್ಯೆ ಎದುರಾಗಿತ್ತು ಎಂದು ಹೇಳಿದ್ದಾರೆ.
ಈ ಚರ್ಚೆ ನಡುವೆ, ಮೊಟ್ಟೆಯಂತಹ ಬೇಗ ಹಾಳಾಗುವ ಆಹಾರ ಉತ್ಪನ್ನಗಳನ್ನು ಸ್ಥಳೀಯ ಅಂಗಡಿಗಳಿಂದ ಖರೀದಿಸುವಂತೆ ಕೆಲವರು ಸಲಹೆ ನೀಡಿದ್ದಾರೆ. ಅಂಗಡಿಯಲ್ಲಿ ಉತ್ಪನ್ನವನ್ನು ನೇರವಾಗಿ ಪರಿಶೀಲಿಸಿ ಖರೀದಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಈ ಘಟನೆ ತಾಜಾ ಹಾಗೂ ಬೇಗ ಹಾಳಾಗುವ ಆಹಾರ ಉತ್ಪನ್ನಗಳ ಸಂಗ್ರಹಣೆ ಮತ್ತು ನಿರ್ವಹಣೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಕಡಿಮೆ ಅವಧಿಯಲ್ಲಿ ಡೆಲಿವರಿ ಮಾಡುವುದರ ಜತೆಗೆ ಹಳೆಯ ಅಥವಾ ಹಾನಿಗೊಳಗಾದ ಉತ್ಪನ್ನಗಳು ಗ್ರಾಹಕರ ಕೈ ಸೇರದಂತೆ ನೋಡಿಕೊಳ್ಳುವುದು ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರಮುಖ ಸವಾಲಾಗಿದೆ.(ಏಜೆನ್ಸೀಸ್)