ನವದೆಹಲಿ: ಒಂದು ಸಣ್ಣ ಭೌಗೋಳಿಕ ಪ್ರದೇಶದಲ್ಲಷ್ಟೇ ಅಲ್ಲ. ಜಗತ್ತಿನ 190 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಇಂದು ಜನಜೀವನಕ್ಕೆ ಹತ್ತಿರುವಾಗುತ್ತಿರುವ ಪ್ರಮುಖ ವಸ್ತು ಎಂದರೆ ಅದು ಫೇಸ್ ಮಾಸ್ಕ್.
ಇದಕ್ಕೆ ಕಾರಣವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಕೋವಿಡ್ನಿಂದಾಗಿ ಫೇಸ್‌ಮಾಸ್ಕ್ ಪ್ರಸ್ತುತ ವಿಶ್ವದಲ್ಲೇ ಹೆಚ್ಚು ಬಳಕೆಯಾಗುತ್ತಿರುವ ಮತ್ತು ಬೇಡಿಕೆಯಿರುವ ಉತ್ಪನ್ನಗಳಲ್ಲಿ ಒಂದಾಗಿದೆ.
ಮಾಸ್ಕ್ ಧರಿಸುವ ಪರಿಪಾಠ ಕಟ್ಟ ಕಡೆಯ ಗ್ರಾಮವೂ ಸೇರಿ 190 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅನ್ವಯವಾಗುತ್ತದೆ.
ಮಾಸ್ಕ್ ಧರಿಸದೆ ಹೊರಗೆ ಹೆಜ್ಜೆ ಹಾಕುವ ಮೂಲಕ ಅನೇಕರು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆಂದು, ಅಂಥವರಿಗೆ ದಂಡ ವಿಧಿಸಿದ ವರದಿಯೂ ಆಗುತ್ತಿರುವುದರ ಮಧ್ಯೆಯೇ ಕ್ರಮೇಣ ಜನ ಕೋವಿಡ್ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.
ಕಳೆದ ಕೆಲವು ತಿಂಗಳುಗಳಲ್ಲಿ ಮಾಸ್ಕ್ಗೆ ಹೆಚ್ಚುತ್ತಿರುವ ಬೇಡಿಕೆ, ಅದರ ನಾವೀನ್ಯತೆ, ಶೈಲಿಯಿಂದಾಗಿ ಮಾರಾಟದಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ.
ಸರ್ಕಾರಗಳು ಮತ್ತು ಆರೋಗ್ಯ ಅಧಿಕಾರಿಗಳಲ್ಲದೆ, ಅನೇಕ ಬ್ರಾಂಡ್‌ಗಳು ಫೇಸ್‌ಮಾಸ್ಕ್‌ಗಳನ್ನು ಧರಿಸುವ ಅಗತ್ಯತೆಯ ಬಗ್ಗೆ ಪ್ರಚಾರ ಮಾಡಿ ಜಾಗೃತಿ ಮೂಡಿಸುತ್ತಿದೆ.
ಈಗ, ಕಾಶ್ಮೀರ- ಶ್ರೀನಗರದಲ್ಲಿ ಉರ್ದು ದಿನಪತ್ರಿಕೆಯೊಂದು ಫೇಸ್‌ಮಾಸ್ಕ್‌ಗಳ ಕುರಿತು ಪ್ರಚಾರ ಮಾಡಲು ಒಂದು ಅನನ್ಯ ಮಾರ್ಗ ಅನುಸರಿಸಿದೆ. 'ರೋಶ್ನಿ' ಪತ್ರಿಕಾ ಸಂಸ್ಥೆ ತನ್ನ ಪತ್ರಿಕೆಯೊಂದಿಗೆ ಉಚಿತ ಫೇಸ್‌ಮಾಸ್ಕ್ ಸೇರಿಸಿ ನೀಡುವ ಮೂಲಕ ಓದುಗರನ್ನು ಅಚ್ಚರಿ ಸಂತೋಷಗೊಳಿಸಿದೆ.
ಪತ್ರಿಕೆಯ ಮೊದಲ ಪುಟದಲ್ಲಿ ಮಾಸ್ಕ್ ಅಂಟಿಸಿ, ಜತೆಗೆ "ಮಾಸ್ಕ್ ಧರಿಸುವುದು ಬಳಸುವುದು ಮುಖ್ಯ" ಎಂಬ ಶೀರ್ಷಿಕೆ ಬರೆದಿದೆ.
"ಈ ಸಂದರ್ಭದಲ್ಲಿ ಈ ಸಂದೇಶವನ್ನು ಸಾರ್ವಜನಿಕರಿಗೆ ಕಳುಹಿಸುವುದು ಮುಖ್ಯ ಎಂದು ನಾವು ಭಾವಿಸಿದ್ದೇವೆ, ಮಾಸ್ಕ್ ಧರಿಸುವುದರ ಮಹತ್ವವನ್ನು ಅವರಿಗೆ ಅರ್ಥವಾಗುವಂತೆ ಮಾಡುವಲ್ಲಿ ಇದು ಉತ್ತಮ ಮಾರ್ಗವಾಗಿದೆ" ಎಂದು 'ರೋಶ್ನಿ' ಸಂಪಾದಕ ಜಹೂರ್ ಶೋರಾ ತಿಳಿಸಿದ್ದಾರೆ.
ಈ ಸೃಜನಶೀಲ ಅಭಿಯಾನದ ಹಿಂದಿನ ವ್ಯಕ್ತಿ ಜೆಹಾದ್ ಶೋರಾ. ಬಹಳಷ್ಟು ಕಾಶ್ಮೀರಿಗಳು ಮಾಸ್ಕ್ ಧರಿಸದಿದ್ದರೂ ದಂಡದಿಂದ ಪಾರಾದ ಅಂಶ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಆರಂಭಿಸಿರುವುದಾಗಿ ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪತ್ರಿಕೆಯ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
“ಒಂದು ಪತ್ರಿಕೆಗೆ ಸುಮಾರು 2 ರೂ.ವೆಚ್ಚವಾಗುತ್ತದೆ.
ಆದರೆ ಮಾಸ್ಕ್ ನ ಪ್ರಾಮುಖ್ಯತೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವುದು ಪತ್ರಿಕೆಯ ಆಶಯವಾಗಿರುವುದರಿಂದ ಪತ್ರಿಕೆಯೊಂದಿಗೆ ಉಚಿತ ಮಾಸ್ಕ್ ನೀಡುತ್ತಿರುವುದು ಪ್ರಶಂಸನೀಯ. ಕೆಲ ಜನರು ಮನೆಯಲ್ಲಿ ಈ ಪತ್ರಿಕೆ ಓದಿದರೂ ದೊಡ್ಡ ಸಮೂಹ ಮಟ್ಟದಲ್ಲಿ ಸಂದೇಶ ತಲುಪಲು ಸಾಧ್ಯ ಎನ್ನುತ್ತಾರೆ ಶ್ರೀನಗರದ ನಿವಾಸಿಗಳು.