ಮೂಡಿಗೆರೆ: ತಾಲೂಕಿನ ಹಲವಾರು ಅಡಕೆ ತೋಟದಲ್ಲಿ ಬೇರು ಹುಳುವಿನ ಬಾಧೆ ಕಂಡುಬಂದಿದ್ದು, ರೋಗ ನಿಯಂತ್ರಣಕ್ಕೆ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ಬೇರು ಹುಳುವಿನ ಬಾಧೆ ಕಂಡುಬಂದ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಚಿಕ್ಕದಾಗಿರುತ್ತದೆ. ಎಲೆ ಮತ್ತು ಹೊಂಬಾಳೆ ಬೆಳವಣಿಗೆ ಕುಂಠಿತವಾಗುತ್ತಿದೆ. ಈ ಹುಳುವಿನ ಬಾಧೆ ಮರಳು ಮಿಶ್ರಿತ ಸಾವಯುವ ಪದಾರ್ಥವಿರುವ ಮಣ್ಣಿನಲ್ಲಿ ಕಂಡುಬರುತ್ತದೆ. ಈ ಹುಳು ಅಡಕೆ ಮರವನ್ನು ಶೇ.25 ರಿಂದ 75 ರವರೆಗೆ ಹಾನಿಯುಂಟು ಮಾಡುತ್ತದೆ.
ನೀರಾವರಿ ಪ್ರದೇಶದ ಮೆದುವಾದ ಜಮೀನಿನಲ್ಲಿ ಹೆಚ್ಚಾಗಿ ಈ ಹುಳು ಕಂಡುಬರುತ್ತದೆ. ದೊಡ್ಡ ಕೀಟವು ಕಂದು ಮತ್ತು ತಿಳಿಹಳದಿ ಬಣ್ಣದಲ್ಲಿರುತ್ತದೆ. ಪ್ರತಿವರ್ಷ ಜುಲೈಯಿಂದ ಸಪ್ಟೆಂಬರ್ ಕೊನೆಯವರೆಗೆ ಈ ಹುಳುವನ್ನು ಕಾಣಬಹುದು. ಈ ಹುಳು ಮಣ್ಣಿನಲ್ಲಿ ಒಂದು ಅಡಿ ಆಳದವರೆಗೆ ಹೋಗಿ ಅಲ್ಲಿ ಮೊಟ್ಟೆ ಇಡುತ್ತದೆ. 2 ವಾರದಲ್ಲಿ ಈ ಮೊಟ್ಟೆಗಳಿಂದ ಹೊರಬಂದ ಮರಿಹುಳುಗಳು ಸಾವಯುವ ಪದಾರ್ಥ ಮತ್ತು ಗಿಡದ ಬೇರುಗಳನ್ನು ತಿನ್ನುತ್ತವೆ. ಮರಿಹುಳುಗಳು 8 ರಿಂದ 72 ವಾರದವರೆಗೆ ಬೆಳೆಯುತ್ತಾ ಅಡಕೆ ಮರದ ಬೇರುಗಳನ್ನು ತಿನ್ನುವುದರಿಂದ ಬೇರು ತುಂಡಾಗಿ ಮರದ ಬೆಳವಣಿಗೆ ಕುಂಠಿತಗೊಂಡು ಮರವನ್ನು ಸುಲಭವಾಗಿ ಅಲುಗಾಡಿಸಬಹುದು. ಹಾಗೂ ಅನೇಕ ವಿವಿಧ ರೀತಿಯ ರೋಗಕ್ಕೆ ಅಡಕೆ ಬೆಳೆ ತುತ್ತಾಗಲಿದೆ. ಮರಿ ಹುಳುಗಳು ಕೋಶವಾಗಿ 2 ವಾರಗಳ ನಂತರ ಫ್ರೌಢ ಕೀಟವಾಗಿ ಮಣ್ಣಿನೊಳಗಿಂದ ಹೊರ ಬರುತ್ತದೆ. ಈ ಹುಳುವಿನ ಬಾಧೆಯನ್ನು ನಿರ್ವಹಣೆ ಮಾಡಲು ರೈತರಿಗೆ ಈಗ ಸೂಕ್ತ ಸಮಯವಾಗಿದೆ.
ನಿರ್ವಹಣಾ ಕ್ರಮಗಳು
ಸಪ್ಟೆಂಬರ್ ತಿಂಗಳಲ್ಲಿ ಪ್ರತಿದಿನ ಸಂಜೆ 6:45 ರಿಂದ ರಾತ್ರಿ 9ರ ವರೆಗೆ ಪ್ರೌಢ ದುಂಬಿಗಳನ್ನು ಹಿಡಿದು ನಾಶಪಡಿಸಬೇಕು. ಅಥವಾ ಸೆಪ್ಟೆಂಬರ್ ಮತ್ತು ಅಕ್ಟೋಬರ ತಿಂಗಳಲ್ಲಿ ಮಟ್ಟರೈಜಿಯಂ ಅನಿಸ್ಲೋಪಿಯೇ ಅಥವಾ ಹೆಟಿರೋರಾಬ್ದಿಟಿಸ್ ರಾಸಾಯನಿಕ 20ಗ್ರಾಂ ಪುಡಿಯನ್ನು 5-8 ಲೀಟರ್ ನೀರಿನಲ್ಲಿ ಬೆರಸಿ ಗಿಡದ ಬುಡಕ್ಕೆ ಸುರಿಯಬೇಕು. ಕೀಟನಾಶಕವಾದ ಕ್ಲೋರ್‌ಪೈರಿಫಾಸ್ 20 ಇಸಿಯನ್ನು ಒಂದು ಲೀಟರ್ ನೀರಿನಲ್ಲಿ 2.5 ಮೀಲಿ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಅಥವಾ ಒಂದು ಎಕರೆ ಬೆಳೆಗೆ 400 ಲೀಟರ್ ನೀರಿನಲ್ಲಿ ಇಮಿಡಾಕ್ಲೋಪ್ರೀಡ್ 200 ಎಸ್‌ಎಲ್ ಅಥವಾ 263 ಮಿಲೀ. ಕ್ಲೋರ್, ಆಂಟ್ರನಿಲಿಫ್ರೋರ್ 18.5 ಎಸ್‌ಸಿಯನ್ನು ಅಡಕೆ ಮರದ ಬುಡಕ್ಕೆ ಆಗಸ್ಟ್ ತಿಂಗಳಲ್ಲಿ ಸಿಂಪಡಣೆ ಮಾಡಬೇಕು. ಇದೇ ರಾಸಾಯನಿಕವನ್ನು ಸಪ್ಟೆಂಬರ್, ಅಕ್ಟೋಬರ್‌ನಲ್ಲಿ ಮರಕ್ಕೆ ಹಾಕಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಟಿ.ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.