ನ್ಯೂಸ್

ಸೊಸೈಟಿಯನ್ನು ದೇಗುಲವೆಂದು ಭಾವಿಸಿ: ಶಾಸಕಿ ರೂಪಕಲಾ ಶಶಿಧರ್ ಸಲಹೆ

Kolar

ಕೆಜಿಎಫ್ : ಎರಡು ದಶಕಗಳಿಂದ ಸಾಲಸೌಲಭ್ಯ ನೀಡುವ ಶಕ್ತಿ ಕಳೆದುಕೊಂಡಿದ್ದ ಕದರಿಪುರ ರೇಷ್ಮೆ ಬೆಳೆಗಾರರು ಹಾಗೂ ರೈತರ ಸಹಕಾರ ಸಂಘಕ್ಕೆ ಮರುಜೀವ ನೀಡಲಾಗಿದ್ದು, ಪಾರದರ್ಶಕವಾಗಿ ಸೊಸೈಟಿ ಮುನ್ನಡೆಸುವಂತೆ ಶಾಸಕಿ ರೂಪಕಲಾ ಎಂ.ಶಶಿಧರ್ ಸೂಚಿಸಿದರು.

ಆಂಧ್ರ ಗಡಿಯ ಕದರಿಪುರ ಎಸ್‌ಎಫ್‌ಸಿಎಸ್ ವ್ಯಾಪ್ತಿಯ 9 ಗ್ರಾಮಗಳ 101 ರೈತರಿಗೆ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ 1 ಕೋಟಿ ರೂಪಾಯಿ ಬಡ್ಡಿರಹಿತ ಕೆಸಿಸಿ ಸಾಲ ವಿತರಿಸಿ ಮಾತನಾಡಿ,

ಈ ಹಿಂದೆ ಮಾಡಿದ ತಪ್ಪು ಮತ್ತೆ ಮಾಡಬೇಡಿ. ಸೊಸೈಟಿಯನ್ನು ದೇವಾಲಯ ಎಂದು ಭಾವಿಸಿ ಪಾರದರ್ಶಕ ಆಡಳಿತದೊಂದಿಗೆ ರೈತರು, ಮಹಿಳೆಯರಿಗೆ ಒದಗಿಸಬಹುದಾದ ಆರ್ಥಿಕ ನೆರವು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಿ ಎಂದರು.

ಬಡವರಿಗೆ ನೆರವಾಗುವುದೇ ಸಹಕಾರ ತತ್ವ. ಇದರಿಂದ ಅನೇಕ ಕುಟುಂಬಗಳು ಸ್ವಾವಲಂಬಿ ಬದುಕು ಸಾಗಿಸಲು ಸಾಧ್ಯವಾಗಲಿದೆ. ರಾಜಕಾರಣ ಚುನಾವಣೆ ಸಮಯಕ್ಕೆ ಸೀಮಿತವಾಗಿರಲಿ, ಸಾಲಸೌಲಭ್ಯ ಒದಗಿಸುವಾಗ ಪಕ್ಷ, ಜಾತಿ ಭೇದ ಎಣಿಸದಿರಿ. ಪ್ರತಿ ಕುಟುಂಬಕ್ಕೂ ಸೊಸೈಟಿ ಸದಸ್ಯತ್ವ ನೀಡಿ, ಗಡಿ ಭಾಗದಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಸಹಕಾರಿ ವ್ಯವಸ್ಥೆಯಿಂದ ಮಾತ್ರ ಸ್ವಾವಲಂಬಿ ಬದುಕು ನೀಡಲು ಸಾಧ್ಯ. ಲಕ್ಷಾಂತರ ಮಹಿಳೆಯರಿಗೆ ಬ್ಯಾಂಕ್ ಬಡ್ಡಿರಹಿತ ಸಾಲ ನೀಡಿದೆ. ಗಡಿ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಮೀಟರ್ ಬಡ್ಡಿ ದಂಧೆಗೆ ಸಾಕಷ್ಟು ಪ್ರಮಾಣದಲ್ಲಿ ಕಡಿವಾಣ ಬಿದ್ದಿದೆ. ಈ ಭಾಗದಲ್ಲೂ ಸೊಸೈಟಿಗಳು ಜನಪರ, ರೈತ, ಮಹಿಳೆಯರ ಪರವಾಗಿ ಕೆಲಸ ಮಾಡಿದ್ದೇ ಆದಲ್ಲಿ ಖಂಡಿತ ಜನರನ್ನು ಬಡ್ಡಿ ದಂಧೆಯ ಶೋಷಣೆಯಿಂದ ಮುಕ್ತಗೊಳಿಸಬಹುದು ಎಂದರು.

ಸೊಸೈಟಿಗಳಲ್ಲಿ ಅಧಿಕಾರ ಗಳಿಸುವವರಿಗೆ ಇಚ್ಛಾಶಕ್ತಿ, ಬದ್ಧತೆ ಇರಬೇಕು. ಮಹಿಳೆಯರು, ಗಣಕೀಕರಣದ ಮೂಲಕ ಪಾರದರ್ಶಕ ಆಡಳಿತ ನೀಡಿ, ಉಳಿತಾಯಕ್ಕೆ ಪ್ರೇರೇಪಿಸಬೇಕು ಎಂದ ಅವರು, ದೊಡ್ಡ ರೈತರು ಮಾತ್ರವಲ್ಲ 5 ಗುಂಟೆ ಜಮೀನು ಇರುವವರಿಗೂ ಸಾಲ ನೀಡಬೇಕು. ಇಷ್ಟು ದಿನ ಸಾಲ ನೀಡಿಕೆಗೆ ಆದ ವಿಳಂಬಕ್ಕೆ ಸೊಸೈಟಿ ಸೂಕ್ತ ದಾಖಲೆ ಸಲ್ಲಿಸದಿದ್ದುದೇ ಕಾರಣ ಎಂದು ತಿಳಿಸಿದರು.

ತಾತೇನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಟಿ.ಎಂ.ನಾರಾಯಣಪ್ಪ ಕದಿರಿಪುರ ಎಂಪಿಸಿಎಸ್ ಅಧ್ಯಕ್ಷ ರಾಮಕೃಷ್ಣಾರೆಡ್ಡಿ, ಮುಖಂಡರಾದ ವೆಂಕಟಕೃಷ್ಣರೆಡ್ಡಿ, ಪದ್ಮನಾಭ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಶಂಕರ್, ಜಿಪಂ ಮಾಜಿ ಸದಸ್ಯ ಅ.ಮು. ಲಕ್ಷ್ಮೀನಾರಾಯಣ, ಮಾಜಿ ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ಮುಖಂಡರಾದ ಸಿ.ವಿ.ಬಾಲಕೃಷ್ಣ, ಪ್ರಸನ್ನ, ಸುರೇಂದ್ರಗೌಡ, ಮುನಿಸ್ವಾಮಿ, ಸುಬ್ರಹ್ಮಣ್ಯ ನಾಯ್ಡು, ಜಯರಾಮಪ್ಪ, ಎಂ.ಆರ್.ಶಂಕರಪ್ಪ, ಸಿ.ಎಂ ಕೃಷ್ಣಮೂರ್ತಿ, ವೆಂಕಟರಾಮ್, ಶ್ರೀಧರ್ ರೆಡ್ಡಿ, ಕೇಶವರೆಡ್ಡಿ, ಕೃಷ್ಣಪ್ಪ, ಸುಬ್ಬಾರೆಡ್ಡಿ, ಶ್ರೀ ಅಣ್ಣಯ್ಯ, ವೆಂಕಟರಾಮ್, ಜಯರಾಮರೆಡ್ಡಿ, ಶ್ರೀನಿವಾಸರೆಡ್ಡಿ, ರಾಮಕೃಷ್ಣರೆಡ್ಡಿ, ರಾಜೇಂದ್ರ ಶಂಕರ್, ಶಿವಪ್ಪ, ಚಂದ್ರಪ್ಪ ಹಾಜರಿದ್ದರು