ಬೆಂಗಳೂರು: ನಾಡಹಬ್ಬ ದಸರಾಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಇನ್ನು ಹತ್ತು ದಿನಗಳ ಕಾಲ ಹಬ್ಬದ ಕಳೆ ಇರಲಿದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುರಾಣ ಪಠಣ ಸೇರಿ ಹಲವು ಧಾರ್ಮಿಕ ಕಾರ್ಯಗಳು ನಡೆಯಲಿವೆ. ಮನೆಗಳಲ್ಲಿ ಹಬ್ಬದ ದೈವಿಕ ಕಳೆ ಹೆಚ್ಚಲಿದ್ದು, ಜನರು ಸಹ ಪೂಜೆ-ಪುನಸ್ಕಾರ, ದೇವರ ಆರಾಧನೆ, ವ್ರತಗಳನ್ನು ಕೈಗೊಳ್ಳಲಿದ್ದಾರೆ. ಅದರಿಂದ ಸ್ಯಾಂಡಲ್‌ವುಡ್ ನಟ, ನಟಿಯರೂ ಹೊರತಾಗಿಲ್ಲ. ‘ರಾನಿ’ ಖ್ಯಾತಿಯ ಸಮೀಕ್ಷಾ ವೈಭವದಿಂದ ನವರಾತ್ರಿ ಆಚರಿಸಲಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡಿರುವ ಅವರು, ‘ನಾನು ಮೂಲತಃ ಶಿವಮೊಗ್ಗದ ಮಂಡಗದ್ದೆಯವಳು. ನಮ್ಮ ಊರಿನಲ್ಲಿ ವಿಶೇಷವಾಗಿ ಕೃಷಿಯ ಸಂಕೇತವಾಗಿ ದಸರಾ ಆಚರಿಸುತ್ತಾರೆ. ಗದ್ದೆಯಲ್ಲಿ ಬೆಳೆದ ಬೆಳೆಯನ್ನು ಇಟ್ಟು ಪೂಜೆ ಮಾಡುತ್ತೇವೆ. ಅಲ್ಲದೇ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಇಷ್ಟಾರ್ಥಗಳು ಈಡೇರಿಸುವಂತೆ ಪ್ರಾರ್ಥಿಸುತ್ತೇವೆ. ಇನ್ನು ಶಿವಮೊಗ್ಗ ಯುವ ದಸರಾವು ವಿಶೇಷವಾಗಿರಲಿದ್ದು, ದೇವಿ ಪೂಜೆ, ಮೆರವಣಿಗೆ, ಸಂಭ್ರಮವು ಹಬ್ಬದ ಮೆರಗು ಹೆಚ್ಚಿಸುತ್ತದೆ’ ಎಂದು ಹೇಳಿಕೊಳ್ಳುತ್ತಾರೆ.
‘ರಾನಿ’ ತಂದ ಹಬ್ಬದ ಯಶಸ್ಸು: ಈ ವರ್ಷದ ದಸರಾ ಹಬ್ಬವು ಸಮೀಕ್ಷಾಗೆ ವಿಶೇಷವಾಗಿರಲಿದೆ. ಈ ಹಿಂದೆ ಊರಿನಲ್ಲಿ ಹಬ್ಬ ಆಚರಿಸುತ್ತಿದ್ದ ನಟಿ, ಈ ಬಾರಿ ಕರ್ನಾಟಕ ಜನತೆ ಮುಂದೆ ಆಚರಿಸುತ್ತಿದ್ದಾರೆ. ಅದಕ್ಕೆ ಕಾರಣ ‘ರಾನಿ’ ತಂದ ಯಶಸ್ಸು. ಈ ಕುರಿತು ಅವರು, ‘ಈ ಹಿಂದೆ ದಸರಾ ಹಬ್ಬವನ್ನು ನಾನು ಅಜ್ಜಿ, ಮಾವನ ಮನೆಯಲ್ಲಿ ಆಚರಿಸುತ್ತಿದ್ದೆ. ಆದರೆ, ಈ ಬಾರಿ ‘ರಾನಿ’ ಯಶಸ್ಸಿನ ಬಳಿಕ ಹಬ್ಬವನ್ನು ಕರ್ನಾಟಕದ ಜನತೆಯೊಂದಿಗೆ ಆಚರಿಸುತ್ತಿದ್ದೇನೆ. ‘ರಾನಿ’ ಬಿಡುಗಡೆಯಾದಾಗಿನಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ. ನಾನು ಎಲ್ಲಿಗೆ ಹೋದರೂ ಜನ ನನ್ನನ್ನು ಗುರುತಿಸುತ್ತಿದ್ದಾರೆ. ಹೀಗಾಗಿ ಹಬ್ಬದ ಖುಷಿ ಮತ್ತಷ್ಟು ಹೆಚ್ಚಿದೆ’ ಎನ್ನುತ್ತಾರೆ ಸಮೀಕ್ಷಾ.
ಮೈಸೂರು ದಸರಾ ಕಣ್ತುಂಬಿಕೊಳ್ಳುವ ಆಸೆ: ಸಮೀಕ್ಷಾ ಬಾಲ್ಯದಲ್ಲಿ ಒಮ್ಮೆ ಮೈಸೂರು ದಸರಾ ವೀಕ್ಷಿಸಿದ್ದರಂತೆ. ‘ಆಗ ಚಿಕ್ಕವಳಿದ್ದ ಕಾರಣ ನೆನಪುಗಳು ಅಸ್ಪಷ್ಟವಾಗಿವೆ. ಹೀಗಾಗಿ ಮತ್ತೊಮ್ಮೆ ನಾಡಹಬ್ಬವನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆಯಿದೆ. ಈ ಬಾರಿ ಮೈಸೂರಿಗೆ ತೆರಳಿ ಲೈವ್ ಆಗಿ ಅಂಬಾರಿ ಮೆರವಣಿಗೆ ವೀಕ್ಷಿಸಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ದೇನೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.
‘ರಾನಿ’ ಬಳಿಕ ‘ರಾಶಿ’: ‘ರಾನಿ’ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಸಮೀಕ್ಷಾಗೆ ಮೊದಲ ಚಿತ್ರದ ಯಶಸ್ಸಿನಿಂದ ಹಲವು ಅವಕಾಶಗಳು ಬಂದಿವೆಯಂತೆ. ಹೀಗಾಗಿ ಈ ಬಾರಿಯ ಹಬ್ಬ ವಿಶೇಷ ಎನ್ನುತ್ತಾರೆ. ‘ನವರಾತ್ರಿ ನನ್ನ ಬದುಕಿನಲ್ಲಿ ಹೊಸತನ ತರುತ್ತಿದೆ. ಮತ್ತಷ್ಟು ಬಿಜಿಯಾಗುತ್ತಿದ್ದೇನೆ. ‘ರಾನಿ’ ಬಳಿಕ ಆದಿತ್ಯ ಶಶಿಕುಮಾರ್ ನಾಯಕನಾಗಿರುವ ‘ರಾಶಿ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದಲ್ಲದೇ, ಐದಾರು ಕಥೆಗಳನ್ನು ಕೇಳಿದ್ದೇನೆ. ಮಾತುಕತೆ ಹಂತದಲ್ಲಿವೆ. ಆದಷ್ಟು ಬೇಗ ಎಲ್ಲ ೈನಲ್ ಆಗಲಿದ್ದು, ಬಳಿಕ ಮಾಹಿತಿ ನೀಡಲಿದ್ದೇನೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.