Ronaldo Retirement Video: ಫುಟ್ಬಾಲ್ ಜಗತ್ತಿನ ಕಿರೀಟವಿಲ್ಲದ ಸುಲ್ತಾನ, ಪೋರ್ಚುಗಲ್ ಕಪ್ತಾನ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ 23 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಆಟಕ್ಕೆ ಭಾವನಾತ್ಮಕವಾಗಿ ತೆರೆ ಎಳೆದಿದ್ದಾರೆ. ಗುರುವಾರ ಮಧ್ಯಾಹ್ನ 3:59ಕ್ಕೆ ತಮ್ಮ ಅಧಿಕೃತ ಎಕ್ಸ್ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಸುದೀರ್ಘ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
ವಿಡಿಯೋ ಪೋಸ್ಟ್ ಆದ ಕೇವಲ ಎರಡೂವರೆ ಗಂಟೆಗಳಲ್ಲಿ 2.7 ಮಿಲಿಯನ್ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಜೊತೆಗೆ 4.85 ಲಕ್ಷಕ್ಕೂ ಹೆಚ್ಚು ಲೈಕ್ಸ್, 1.56 ಲಕ್ಷಕ್ಕೂ ಹೆಚ್ಚು ರಿಪೋಸ್ಟ್ಗಳು, 32,000ಕ್ಕೂ ಹೆಚ್ಚು ಕಾಮೆಂಟ್ಗಳು ಹಾಗೂ 10,000ಕ್ಕೂ ಹೆಚ್ಚು ಬುಕ್ಮಾರ್ಕ್ಗಳನ್ನು ಪಡೆದು ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
41 ವರ್ಷದ ರೊನಾಲ್ಡೊ ತಮ್ಮ ಈ ಪಯಣವನ್ನು ನೆನಪಿಸಿಕೊಳ್ಳುತ್ತಾ, ‘ನನ್ನ ದೇಶವನ್ನು ಪ್ರತಿನಿಧಿಸುವುದು ಎಂದರೆ ಬರಿ ಗೋಲುಗಳು, ದಾಖಲೆಗಳು ಅಥವಾ ಟ್ರೋಫಿಗಳು ಮಾತ್ರವಲ್ಲ. ಅಭಿಮಾನಿಗಳ ಪ್ರೀತಿ ಮತ್ತು ಈ ಪಯಣದಲ್ಲಿ ಸಾಥ್ ನೀಡಿದ ಜನರ ಜೊತೆಗಿನ ಅನುಭವವೇ ನನಗೆ ಮುಖ್ಯ’ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಈ 20ಕ್ಕೂ ಹೆಚ್ಚು ವರ್ಷಗಳ ವೃತ್ತಿಜೀವನದಲ್ಲಿ ಕುಟುಂಬದವರ ತ್ಯಾಗ ಹಾಗೂ ತಾವು ಎದುರಿಸಿದ ಕಠಿಣ ಹಂತಗಳನ್ನು ಸ್ಮರಿಸಿದ ಅವರು, ‘ನಾನು ತಲೆಯನ್ನು ಎತ್ತಿ ಹೆಮ್ಮೆಯಿಂದ ಹೊರನಡೆಯುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
ಆಗಸ್ಟ್ 2003 ರಲ್ಲಿ ಪೋರ್ಚುಗಲ್ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ರೊನಾಲ್ಡೊ, ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಅವರ ನಿವೃತ್ತಿ ಸುದ್ದಿಯಿಂದ ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಫುಟ್ಬಾಲ್ ಅಭಿಮಾನಿಗಳು ಕಣ್ಣೀರಿಡುತ್ತಿದ್ದು, ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ಆಟಗಾರನಿಗೆ ಭಾವಪೂರ್ಣ ಶುಭಾಶಯ ಹಾಗೂ ಗೌರವ ಸಲ್ಲಿಸುತ್ತಿದ್ದಾರೆ.
ಎಕ್ಸ್ನಲ್ಲಿ 114 ಮಿಲಿಯನ್ಗೂ ಹೆಚ್ಚು ಹಾಗೂ ಇನ್ಸ್ಟಾಗ್ರಾಮ್ನಲ್ಲಿ 619 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಹೊಂದಿರುವ ರೊನಾಲ್ಡೊ ಅವರ ಈ ವಿಡಿಯೋಗೆ ವಿಶ್ವದ ಪ್ರಮುಖ ಕ್ರೀಡಾಪಟುಗಳು ಹಾಗೂ ಚಿತ್ರರಂಗದ ಗಣ್ಯರು ಪ್ರತಿಯಾಗಿ ಕಮೆಂಟ್ ಮಾಡುತ್ತಿದ್ದಾರೆ.