ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಬಿಗುವು ಹೆಚ್ಚಲು ಕಾರಣವಾಗಿರುವ ಲೆಬನಾನ್ನಲ್ಲಿ ಸಂಭವಿಸಿದ ಪೇಜರ್ ಮತ್ತು ವಾಕಿ-ಟಾಕಿ ಸ್ಫೋಟ ಪ್ರಕರಣದ ತನಿಖೆ ವೇಳೆ ಕೇರಳದ ವಯನಾಡು ಮೂಲದ ಯುವಕನೊಬ್ಬನ ಹೆಸರು ಕೇಳಿ ಬಂದಿದೆ.
30 ಸಾವು ಹಾಗೂ ಸಾವಿರಾರು ಜನರು ಗಾಯಗೊಳ್ಳಲು ಕಾರಣವಾಗಿರುವ ಪೇಜರಾಸ್ತ್ರ ಸ್ಪೋಟದಲ್ಲಿ, ನಾರ್ವೆಗೆ ಉನ್ನತ ಅಧ್ಯಯನಕ್ಕೆ ತೆರಳಿದ್ದ ರಿನ್ಸನ್ ಜೋಸ್ ಎಂಬಾತನ ಪಾತ್ರವಿದೆಯೆಂದು ಹೇಳಲಾಗಿದೆ. ಕೇರಳದಿಂದ ವಲಸೆ ಹೋಗಿದ್ದ ಜೋಸ್, ಈಗ ನಾರ್ವೆ ನಾಗರಿಕ. 37 ವರ್ಷದ ಈತ ಬಲ್ಗೇರಿಯಾದಲ್ಲಿ ಹೊಂದಿರುವ ಕಂಪನಿಯೊಂದು ಲೆಬನಾನ್ನ ಹಿಜ್ಬುಲ್ಲಾ ಉಗ್ರಗಾಮಿಗಳಿಗೆ ಪೇಜರ್ಗಳನ್ನು ಸರಬರಾಜು ಮಾಡಿತ್ತು ಎಂದು ಆರಂಭಿಕ ವರದಿಗಳು ತಿಳಿಸಿವೆ.
ಇಸ್ರೇಲ್ನ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್, ತೈವಾನ್ ಮೂಲದ ಕಂಪನಿ ಗೋಲ್ಡ್ ಅಪೋಲೋ ತಯಾರಿಸಿದ ಪ್ರತಿಯೊಂದು ಸಾಧನದಲ್ಲಿ ಮೂರು ಗ್ರಾಮ್ ಸ್ಪೋಟಕವನ್ನು ತುಂಬಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ದೇಶದ ಆಂತರಿಕ ಭದ್ರತಾ ಸಚಿವಾಲಯದೊಂದಿಗೆ ತಾನು ಸಮನ್ವಯ ಸಾಧಿಸಿ ಕಂಪನಿಯೊಂದರ ಪಾತ್ರದ ಕುರಿತು ತನಿಖೆ ನಡೆಸುತ್ತಿರುವುದಾಗಿ ಬಲ್ಗೇರಿಯಾದ ಭದ್ರತಾ ಸಂಸ್ಥೆ ಡಿಎಎನ್ಎಸ್ ಪೇಜರ್ಗಳು ಸ್ಪೋಟಿಸಿದ ಎರಡು ದಿನಗಳ ನಂತರ, ಅಂದರೆ ಗುರುವಾರ ಹೇಳಿತ್ತು. ಬಲ್ಗೇರಿಯಾದ ನೋರ್ಟಾ ಗ್ಲೋಬಲ್ ಎಂಬ ಆ ಕಂಪನಿ ರಿನ್ಸನ್ ಜೋಸ್ ಮಾಲಿಕತ್ವದ್ದು ಎನ್ನಲಾಗಿದೆ.
ಅಮೆರಿಕದ ಮತ್ತು ಇಸ್ರೇಲ್ನ ಗುಪ್ತಚರ ಸಂಸ್ಥೆಗಳಾದ ಸಿಐಎ ಹಾಗೂ ಮೊಸ್ಸಾದ್ ಒಟ್ಟು ಸೇರಿ ಇರಾನ್ನ ಪರಮಾಣು ಕಾರ್ಯಕ್ರಮವನ್ನು ವಿಫಲಗೊಳಿಸಿದ್ದವು ಎನ್ನುವ ವಿಚಾರ ಈಗ ಬಹಿರಂಗಕ್ಕೆ ಬಂದಿದೆ. ರಾಜಧಾನಿ ಟೆಹರಾನ್ನಿಂದ 300 ಕಿಮೀ ದಕ್ಷಿಣಕ್ಕಿರುವ ನತಾಂಝå್ನಲ್ಲಿ ಇರಾನ್ನ ಪ್ರಮುಖ ಪರಮಾಣು ಸ್ಥಾವರವಿದ್ದು ಅದರ ಚಟುವಟಿಕೆಗಳನ್ನು ನಿಷ್ಕಿ›ಯಗೊಳಿಸಲು ಸಿಐಎ ಮತ್ತು ಮೊಸ್ಸಾದ್ ಕಾರ್ಯತಂತ್ರ ರಚಿಸಿ ಸ್ಟಕ್ಸ್ನೆಟ್ ಎಂಬ ಮಾಲ್ವೇರ್ಅನ್ನು ನೇರವಾಗಿ ಇರಾನಿನ ಹಾರ್ಡ್ವೇರ್ಗೆ ನುಸುಳಿಸಿತ್ತು. ಅಮೆರಿಕ ಮತ್ತು ಇಸ್ರೇಲ್ ದೇಶಗಳ ಸಂಯುಕ್ತ ಪ್ರಯತ್ನದಿಂದ ರೂಪಿಸಲಾದ ಈ ಮಾಲ್ವೇರ್, ಜಗತ್ತಿನ ಪ್ರಥಮ ಡಿಜಿಟಲ್ ಅಸ್ತ್ರವಾಗಿದೆ.
ಈ ನಡುವೆ, ಪೇಜರಾಸ್ತ್ರದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ವೆಂದು ಹಂಗೆರಿ ಮೂಲದ ಬಿಎಸಿ ಕನ್ಸಲ್ಟಿಂಗ್ ಕಂಪನಿಯ ಮಾಲಕಿ ಕ್ರಿಸ್ಟಿನಾ ಬಾರ್ಸನಿ-ಅರ್ಕಿಡಿಯಾಕೊನೊ ಹೇಳಿದ್ದಾರೆ. ಆಕೆಯ ಮಾಲಿಕತ್ವದ ಕಂಪನಿ, ತೈವಾನ್ನ ಮೂಲ ಕಂಪನಿ ತೈವಾನ್ ಗೋಲ್ಡ್ ಅಪೋಲೋದಿಂದ ಪೇಜರ್ನ ವಿನ್ಯಾಸದ ಲೈಸೆನ್ಸ್ ಪಡೆದಿತ್ತು ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಸ್ಪೋಟಗೊಂಡ ಪೇಜರ್ಗಳನ್ನು ತನ್ನ ಕಂಪನಿ ತಯಾರಿಸಿಲ್ಲ ಎಂದು ಏಳು ಭಾಷೆಗಳನ್ನು ಬಲ್ಲ, ಕಣ ಭೌತಶಾಸ್ತ್ರದಲ್ಲಿ ಪಿಎಚ್ಡಿ ಹೊಂದಿರುವ 49 ವರ್ಷದ ಕ್ರಿಸ್ಟಿನಾ ಸ್ಪಷ್ಟಪಡಿಸಿದ್ದಾರೆ.