ನ್ಯೂಸ್

ನಾಗಮಂಗಲದಲ್ಲಿ ಮತಾಂಧ ಶಕ್ತಿಗಳ ಅಟ್ಟಹಾಸ: ಆರ್.ಅಶೋಕ್ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮತಾಂಧ ಶಕ್ತಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಜಿಹಾದಿ ಮುಳ್ಳುಗಳ ದುಸ್ಸಾಹಸ ಶಾಂತಿ ಕದಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ನಿನ್ನೆ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆ ಅತ್ಯಂತ ಖಂಡನೀಯವಾಗಿದೆ.

ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಕಣ್ಮರೆಯಾಗಿರುವ ಕಾನೂನು ಸುವ್ಯವಸ್ಥೆಗೆ ಮತ್ತೊಂದು ನಿದರ್ಶನವಾಗಿದೆ. ಕಳೆದ ವರ್ಷವೂ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಇಂತಹುದೇ ಘಟನೆ ನಡೆದಿದೆ.

ಸರ್ಕಾರದ ವೈಫಲ್ಯ

ಈ ವರ್ಷವೂ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆಗೆ ಅಡ್ಡಿಪಡಿಸುವ ದುರುದ್ದೇಶದಿಂದ ಮುಸ್ಲಿಂ ಮತಾಂಧ ಪುಂಡರು ಪೂರ್ವನಿಯೋಜಿತವಾಗಿ ದಾಂಧಲೆ ಎಬ್ಬಿಸಿದ್ದಾರೆ.

ಸಾರ್ವಜನಿಕರು, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವುದು, ಚಪ್ಪಲಿ ಎಸೆಯುವುದು, ಪೆಟ್ರೋಲ್ ಬಾಂಬ್ ಸ್ಫೋಟಿಸುವುದು, ತಲ್ವಾರ್ ಝಳಪಿಸುವಂತಹ ದುಸ್ಸಾಹಸಕ್ಕೆ ಮುಂದಾಗುತ್ತಾರೆ ಅಂದರೆ ರಾಜ್ಯದಲ್ಲಿ ಇಂತಹ ಮತಾಂಧ ಪುಂಡರಿಗೆ, ಮುಸ್ಲಿಂ ಮೂಲಭೂತವಾದಿಗಳಿಗೆ ಕಾನೂನಿನ ಭಯವೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ.

ತಾಲಿಬಾನ್ ಮನಸ್ಥಿತಿಗೆ ಪೋಷಣೆ

ಅಷ್ಟೇ ಅಲ್ಲದೆ, ರಕ್ಷಣೆ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದವರ ಮೇಲೆಯೇ ಈ ಮತಾಂಧ ಪುಂಡರು ಹಲ್ಲೆ, ದಬ್ಬಾಳಿಕೆ ನಡೆಸುತ್ತಾರೆ ಅಂದರೆ ಈ ದುಷ್ಟರ ತಾಲಿಬಾನ್ ಮನಸ್ಥಿತಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪ್ರೋತ್ಸಾಹ, ಪೋಷಣೆ ದೊರಕುತ್ತಿದೆ ಎಂದು ಊಹಿಸಿಕೊಳ್ಳಿ ಎಂದಿದ್ದಾರೆ.

ರಾಜ್ಯ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣ, ಓಲೈಕೆ ರಾಜಕಾರಣ, ತುಷ್ಟೀಕರಣವೇ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದಕ್ಕೆ ನೇರ ಕಾರಣ ಎಂದು ದೂರಿದ್ದಾರೆ.

ಇಂತಹ ಮತಾಂಧ ಪುಂಡರ ಬಾಲ ಕತ್ತರಿಸದೆ ಹೀಗೆ ಬಿಟ್ಟರೆ ಇಂತಹವರು ನಾಳೆ ಉಗ್ರವಾದಿಗಳಾಗುವುದರಲ್ಲಿ ಸಂಶಯವೇ ಇಲ್ಲ. ನಿನ್ನೆಯ ಗಲಭೆಗೆ ಕಾರಣರಾದ ಸಮಾಜ ಘಾತುಕ ಶಕ್ತಿಗಳನ್ನ ಈ ಕೂಡಲೇ ಬಂಧಿಸಿ ಕಾನೂನು ವಶಕ್ಕೆ ಒಪ್ಪಿಸಬೇಕು.

ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಜಿಹಾದಿ ಮಾನಸಿಕತೆಗೆ ಜಾಗವಿಲ್ಲ ಎಂಬ ದಿಟ್ಟ ಸಂದೇಶ ರವಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಆರ್.ಅಶೋಕ್ ಒತ್ತಾಯಿಸಿದ್ದಾರೆ.