ಮುಂಬೈ: ಮೈದಾನದಲ್ಲಿ ಮಾತ್ರವಲ್ಲ, ಮೈದಾನದ ಹೊರಗೂ ತಮ್ಮ ಸೌಮ್ಯ ಹಾಗೂ ಮಾನವೀಯ ನಡವಳಿಕೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma)
ಅವರ ಮತ್ತೊಂದು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಘಟನೆ ಏನು?
ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಶ್ರೀ' ಪ್ರಶಸ್ತಿಯನ್ನು ಸ್ವೀಕರಿಸಲು ರೋಹಿತ್ ಶರ್ಮಾ ಅವರು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಅಲ್ಲಿ ನೆರೆದಿದ್ದ ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾದರು.
ಆದಾಗ್ಯೂ, ಶರ್ಮಾ ಅವರ ಬಾಡಿಗಾರ್ಡ್, ಅಭಿಮಾನಿಗಳು ಯಾರೂ ರೋಹಿತ್ ಬಳಿ ಬರದಂತೆ ತಡೆಯಲು ಮುಂದಾಗಿದ್ದಾರೆ. ಇದೇ ಗೊಂದಲದಲ್ಲಿ ಆತ ಅಲ್ಲಿಯೇ ನಡೆದು ಹೋಗುತ್ತಿದ್ದ ಹಿರಿಯ ನಾಗರಿಕರೊಬ್ಬರ ದಾರಿಯನ್ನೂ ತಡೆದು ನಿಂತಿದ್ದರು. ಈ ದೃಶ್ಯವನ್ನು ತಕ್ಷಣವೇ ಗಮನಿಸಿದ ರೋಹಿತ್ ತೀವ್ರ ಕೋಪಗೊಂಡಿದ್ದು, ವೃದ್ಧ ವ್ಯಕ್ತಿಗೆ ಹೋಗಲು ದಾರಿ ಮಾಡಿಕೊಡುವ ಸಲುವಾಗಿ, ತಮ್ಮದೇ ಭದ್ರತಾ ಸಿಬ್ಬಂದಿಯನ್ನು ಕೈಯಿಂದ ಪಕ್ಕಕ್ಕೆ ತಳ್ಳಿ ಗದರಿಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಬ್ಬ ಬಳಕೆದಾರ ಬಾಡಿಗಾರ್ಡ್ ತಪ್ಪು ಏನಿದೆ? ಅವನ ಮೇಲೆ ಯಾಕೆ ರೋಹಿತ್ ಕಿರುಚಾಡುತ್ತಿದ್ದಾರೆ? ಆತ ಕೇವಲ ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾನಷ್ಟೇ. ಹೀಗೆಲ್ಲಾ ಆಡೋದಾದ್ರೆ ಫೋಟೋ ತೆಗೆಸಿಕೊಳ್ಳೋಕೆ ಹೋಗಲೇಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರ ರೋಹಿತ್ ಶರ್ಮಾ ಕೇವಲ ಕೋಪಗೊಂಡು ಬಾಡಿಗಾರ್ಡ್‌ನನ್ನು ತಳ್ಳಲಿಲ್ಲ. ಆ ವೃದ್ಧ ಅಭಿಮಾನಿಯನ್ನು ತಳ್ಳಿದ್ದಕ್ಕಾಗಿ ಮೊದಲು ತನ್ನ ಅಂಗರಕ್ಷಕನನ್ನು ಗದರಿಸಿದ ರೋಹಿತ್, ಆ ನಂತರ ಆತ ಬೇಸರ ಮಾಡಿಕೊಳ್ಳಬಾರದು ಎಂದು ಆ ಬಾಡಿಗಾರ್ಡ್‌ನನ್ನು ನಿಧಾನವಾಗಿ ಪಕ್ಕಕ್ಕೆ ಕರೆದು ಸಮಾಧಾನಪಡಿಸಿದರು. ಇವರಲ್ಲಿ ಯಾವುದೇ ಅಹಂ ಇಲ್ಲ, ಇವರದ್ದೇನಿದ್ದರೂ ಕ್ಲಾಸ್ ಅಷ್ಟೇ ಎಂದು ಕಾಮೆಂಟ್ ಮಾಡಿದ್ದಾರೆ.
ಚೆಪಾಕ್‌ನಲ್ಲಿ ಹಳೆ ದಾಖಲೆಗಳನ್ನು ಧೂಳೀಪಟ ಮಾಡಿದ ರೋಹಿತ್ ಶರ್ಮಾ!
ಆಫ್ಘಾನಿಸ್ತಾನ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (79 ರನ್, 69 ಎಸೆತ) ಹಲವು ಐತಿಹಾಸಿಕ ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ. ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ (ಅಜೇಯ 110) ಅವರ ಭರ್ಜರಿ ಬ್ಯಾಟಿಂಗ್ ನೆರವೇರಿಕೆಯಿಂದ ಭಾರತ 219 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿ, ಸರಣಿ ಕ್ಲೀನ್ ಸ್ವೀಪ್ ಸಾಧಿಸಿತು.
ಈ ಇನಿಂಗ್ಸ್ ಮೂಲಕ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ಭಾರತದ ಅತ್ಯಂತ ಹಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ 1989ರಲ್ಲಿ ಮೊಹಿಂದರ್ ಅಮರನಾಥ್ ಬರೆದಿದ್ದ ಸುದೀರ್ಘ ದಾಖಲೆಯನ್ನು ಮುರಿದರು. ಅಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ರನ್ ಗಳಿಸಿದ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನೂ ಮೀರಿ ರೋಹಿತ್ ಈಗ ಅಗ್ರಸ್ಥಾನಕ್ಕೇರಿದ್ದಾರೆ (ಏಜೆನ್ಸೀಸ್).