ಮಂಡ್ಯ: ‘ತನ್ನ ಅಂತ್ಯಕ್ರಿಯೆಗೆ ಸಿದ್ದರಾಮಯ್ಯ, ನಟ ಯಶ್ ಬರಬೇಕು’ ಅಂತ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದ ರಾಮಕೃಷ್ಣ ಎಂಬ ಯುವಕನ ಸಾವಿಗೆ ರಾಕಿಂಗ್ ಸ್ಟಾರ್ ಯಶ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, 'ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು.. ಜೀವನ.. ಹೆಮ್ಮೆ.. ಆದರೆ ಮಂಡ್ಯದ ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮೆಪಡಲು ಸಾಧ್ಯವೇ... ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ.. ಕೋಡಿ ದೊಡ್ಡಿ ರಾಮಕೃಷ್ಣನ ಆತ್ಮಕ್ಕೆ ಚಿರಶಾಂತಿ ಸಿಗಲಿ... ಓಂ ಶಾಂತಿ...' ಎಂದು ಟ್ವಿಟ್ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕ ಸಿದ್ದರಾಯಯ್ಯ ಕೂಡ ರಾಮಕೃಷ್ಣನ ಅಂತ್ಯಕ್ರಿಯೆಯಲ್ಲಿ ಗುರುವಾರ ಭಾಗವಹಿಸಿ ಅಂತಿಮ ದರ್ಶನ ಪಡೆದರ. ‘ಅತ್ಯಂತ ದುಃಖದಿಂದ ಆತನ ಕೊನೆ ಆಸೆ ಈಡೇರಿಸಿದ್ದೇನೆ. ಸಮಸ್ಯೆಗಳಿಗೆ ಸಾವು ಎಂದಿಗೂ ಪರಿಹಾರವಲ್ಲ. ಸಮಸ್ಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದರೆ ತಮ್ಮ ಸಮಸ್ಯೆಯನ್ನು ಬೇರೊಬ್ಬರ ಹೆಗಲಿಗೆ ವರ್ಗಾಯಿಸಿದಂತೆ. ಸಾವಿನ ನಂತರವೂ ಸಮಸ್ಯೆ ಹಾಗೆಯೇ ಉಳಿಯುತ್ತೆ, ಆದರೆ ಅಮೂಲ್ಯ ಬದುಕೊಂದು ನಷ್ಟವಾಗುತ್ತೆ’ ಎಂದು ಟ್ವಿಟ್ ಮಾಡಿದ್ದಾರೆ.
‘ಕಷ್ಟಗಳು ಬಂದಾಗ ಎದುರಿಸುವ ಗಟ್ಟಿತನ ಪ್ರತಿಯೊಬ್ಬರಲ್ಲೂ ಬರಬೇಕು. ನೆನಪಿರಲಿ, ಸಮಸ್ಯೆಗಳು ತಾತ್ಕಾಲಿಕ, ಆದರೆ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು ಶಾಶ್ವತ. ಸಮಸ್ಯೆಯನ್ನು ಮೆಟ್ಟಿನಿಂತು ಬದುಕು ಕಟ್ಟಿಕೊಂಡಾಗ ಇವನು ನನ್ನ ಅಭಿಮಾನಿ ಎಂದು ಹೇಳಲು ನಮಗೂ ಹೆಮ್ಮೆಯಾಗುತ್ತೆ. ಅಭಿಮಾನಿಯೊಬ್ಬನ ಸಾವು ಎಷ್ಟು ನೋವು ಕೊಡುತ್ತದೋ, ಆತ್ಮಹತ್ಯೆ ಅದರ ಎರಡು ಪಟ್ಟು ಕಾಡುತ್ತದೆ’ ಎಂದಿದ್ದಾರೆ.
‘ಯಾರ ಅಭಿಮಾನಿಯೇ ಆಗಲಿ, ಯಾವ ಧರ್ಮ – ಸಿದ್ಧಾಂತವೇ ಇರಲಿ, ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಡುಕಿನ ನಿರ್ಧಾರ ಬೇಡ. ಪ್ರತೀ ಜೀವವೂ ಅಮೂಲ್ಯ. ಕತ್ತಲು ಕಳೆದ ನಂತರ ಬೆಳಕು ಬಂದಂತೆ, ಕಷ್ಟಗಳು ದೂರಾಗಲೇಬೇಕು. ಭರವಸೆಯೇ ಬದುಕು ಎನ್ನುವುದನ್ನು ಮರೆಯದಿರೋಣ’ ಎಂದಿದ್ದಾರೆ.