ಗುಜರಾತ್: ಕಳ್ಳತನ ಮಾಡುವ ಸ್ಕೆಚ್ ಹಾಕಿಕೊಂಡು ಚಿನ್ನದ ಅಂಗಡಿಗೆ ಬಂದಿದ್ದ ಕಿರಾತಕಿ ಮಹಿಳೆ, ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಲು ಯತ್ನಿಸಿ (Robbery Bid), ಕಡೆಗೆ ಹಿಗ್ಗುಮುಗ್ಗಾ ಏಟು ತಿಂದ ಘಟನೆ ಗುಜರಾತ್ನ ಅಹಮದಾಬಾದ್‌ನಲ್ಲಿ ವರದಿಯಾಗಿದೆ.
ನವೆಂಬರ್ 3ರ ಮಧ್ಯಾಹ್ನ 12:30ರ ಸುಮಾರಿಗೆ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದೆ. ದುಪಟ್ಟಾದಿಂದ ಮುಖ ಮುಚ್ಚಿಕೊಂಡಿದ್ದ ಮಹಿಳೆ, ಗ್ರಾಹಕರಂತೆಯೇ ಮಾಲೀಕನ ಎದುರು ನಟಿಸುತ್ತಾ ಚಿನ್ನ-ಬೆಳ್ಳಿ ಅಂಗಡಿಗೆ ಎಂಟ್ರಿಕೊಟ್ಟಿದ್ದಾಳೆ. ಕೆಲವು ಕ್ಷಣಗಳವರೆಗೂ ಮಾತನಾಡುತ್ತಿದ್ದ ಆಕೆ, ಏಕಾಏಕಿ ಮಾಲೀಕನ ಕಣ್ಣಿಗೆ ಮೆಣಸಿನ ಪುಡಿ ಎರಚಿದಳು. ಆದರೆ, ಇದರಿಂದ ಹೆಚ್ಚು ತೊಂದರೆಗೆ ಸಿಲುಕದ ವ್ಯಕ್ತಿ, ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದು, 15ಕ್ಕೂ ಹೆಚ್ಚು ಬಾರಿ ಕಪಾಳಮೋಕ್ಷ ಮಾಡಿದ್ದಾನೆ.
25 ಸೆಕೆಂಡ್ಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಬಾರಿ ಥಳಿಸಿದ ಮಾಲೀಕ, ಆಕೆಯ ತಪ್ಪಿಸಿಕೊಳ್ಳದ ರೀತಿಯಲ್ಲಿ ಕೈಹಿಡಿದು ಕೌಂಟರ್‌ನಿಂದ ಹೊರಬಂದು ಥಳಿಸಿದ್ದಾನೆ. ಘಟನೆಯ ದೃಶ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಾಲೀಕ ಮಾತ್ರ ಇಲ್ಲಿಯವರೆಗೂ ಪೊಲೀಸರ ಬಳಿ ದೂರು ದಾಖಲಿಸಿಲ್ಲ ಎಂದು ಹೇಳಲಾಗಿದೆ. ಆದರೆ, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಖಾಕಿ ಪಡೆ ಮಹಿಳೆಯನ್ನು ಪತ್ತೆಹಚ್ಚಲು ಪ್ರಾರಂಭಿಸಿದ್ದಾಗಿ ರಾಣಿಪ್ ಪೊಲೀಸ್ ಠಾಣೆಯ ಪಿಐ ಕೇತನ್ ವ್ಯಾಸ್ ತಿಳಿಸಿದ್ದಾರೆ,(ಏಜೆನ್ಸೀಸ್).