Hurigadale vs Whey Protein: ದೇಹಕ್ಕೆ ಬೇಕಾದಷ್ಟು ಪ್ರೋಟೀನ್ ಪಡೆಯಲು ಹುರಿಗಡಲೆ ಮತ್ತು ವೇ ಪ್ರೋಟೀನ್‌ನ್ನು ಹಲವರು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ ಇವೆರಡರ ಪೌಷ್ಟಿಕಾಂಶದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಹುರಿಗಡಲೆಯಲ್ಲಿ ಪ್ರೋಟೀನ್ ಜತೆಗೆ ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಕಬ್ಬಿಣವೂ ಸಿಗುತ್ತದೆ.
ಡಯಟಿಷಿಯನ್‌ವೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಹುರಿಗಡಲೆ ಮತ್ತು ವೇ ಪ್ರೋಟೀನ್‌ನಲ್ಲಿರುವ ಪೌಷ್ಟಿಕಾಂಶಗಳ ಅಂದಾಜು ಹೋಲಿಕೆಯನ್ನು ಹಂಚಿಕೊಂಡಿದ್ದಾರೆ. ಆದರೆ ಬ್ರ್ಯಾಂಡ್, ತಯಾರಿಸುವ ವಿಧಾನ, ಸೇರಿಸುವ ಪದಾರ್ಥಗಳು ಮತ್ತು ಸೇವಿಸುವ ಪ್ರಮಾಣಕ್ಕೆ ಅನುಗುಣವಾಗಿ ಈ ಮೌಲ್ಯಗಳಲ್ಲಿ ವ್ಯತ್ಯಾಸವಾಗಬಹುದು ಎಂದು ಅವರು ತಿಳಿಸಿದ್ದಾರೆ.
ಡಯಟಿಷಿಯನ್ ಹಂಚಿಕೊಂಡ ಅಂದಾಜಿನ ಪ್ರಕಾರ, ಹುರಿಗಡಲೆಯಲ್ಲಿ ಸುಮಾರು 400 ಕ್ಯಾಲರಿ, 20 ಗ್ರಾಂ ಪ್ರೋಟೀನ್, 60 ಗ್ರಾಂ ಕಾರ್ಬೋಹೈಡ್ರೇಟ್, 10 ಗ್ರಾಂ ಫೈಬರ್ ಮತ್ತು 7 ಮಿ.ಗ್ರಾಂ ಕಬ್ಬಿಣ ಇದೆ. ಮತ್ತೊಂದೆಡೆ, ವೇ ಪ್ರೋಟೀನ್‌ನಲ್ಲಿ ಸುಮಾರು 370 ಕ್ಯಾಲರಿ, 70 ಗ್ರಾಂ ಪ್ರೋಟೀನ್, 12 ಗ್ರಾಂ ಕಾರ್ಬೋಹೈಡ್ರೇಟ್, 2 ಗ್ರಾಂ ಫೈಬರ್ ಮತ್ತು 1 ಮಿ.ಗ್ರಾಂ ಕಬ್ಬಿಣ ಇದೆ. ಹೀಗಾಗಿ ಪ್ರೋಟೀನ್ ಪ್ರಮಾಣದಲ್ಲಿ ವೇ ಪ್ರೋಟೀನ್ ಮುಂದಿದ್ದರೆ, ಫೈಬರ್ ಮತ್ತು ಕಬ್ಬಿಣದ ಪ್ರಮಾಣದಲ್ಲಿ ಹುರಿಗಡಲೆ ಮುಂದಿದೆ.
ಹುರಿಗಡಲೆಯಲ್ಲಿ ಪ್ರೋಟೀನ್ ಮಾತ್ರವಲ್ಲದೆ ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಕಬ್ಬಿಣವೂ ಸಿಗುತ್ತದೆ. ಹೀಗಾಗಿ ಇದನ್ನು ಸಾಮಾನ್ಯ ಆಹಾರದ ಭಾಗವಾಗಿ ಸೇವಿಸಬಹುದು. ಆದರೆ ನಿಮ್ಮ ಗುರಿ ದಿನಕ್ಕೆ ಬೇಕಾದ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದಾದರೆ, ಹುರಿಗಡಲೆಯಿಂದ ಸಿಗುವ ಪ್ರೋಟೀನ್ ವೇ ಪ್ರೋಟೀನ್‌ಗೆ ಹೋಲಿಸಿದರೆ ಕಡಿಮೆ.
ವೇ ಪ್ರೋಟೀನ್ ಹಾಲಿನಿಂದ ಪಡೆಯುವ ಸಾಂದ್ರಿತ ಪ್ರೋಟೀನ್ ಮೂಲವಾಗಿದೆ. ಕಡಿಮೆ ಕಾರ್ಬೋಹೈಡ್ರೇಟ್ ಜೊತೆಗೆ ಹೆಚ್ಚಿನ ಪ್ರಮಾಣದ ಪ್ರೋಟೀನ್ ಸಿಗುವುದರಿಂದ, ದೈನಂದಿನ ಪ್ರೋಟೀನ್ ಅಗತ್ಯವನ್ನು ಸುಲಭವಾಗಿ ಪೂರೈಸಿಕೊಳ್ಳಲು ಬಯಸುವವರಿಗೆ ಇದು ಅನುಕೂಲಕರ ಆಯ್ಕೆಯಾಗಬಹುದು. ಪ್ರೋಟೀನ್ ಪಡೆಯಲು ವೇ ಪ್ರೋಟೀನ್ ಉತ್ತಮ ಆಯ್ಕೆ ಎಂದು ಸೋನಿಯಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇದಕ್ಕೆ ಎಲ್ಲರಿಗೂ ಒಂದೇ ಉತ್ತರ ಅಂತಿಲ್ಲ. ನಿಮ್ಮ ದೈನಂದಿನ ಪ್ರೋಟೀನ್ ಅಗತ್ಯ, ಆಹಾರ ಪದ್ಧತಿ ಮತ್ತು ಆರೋಗ್ಯದ ಗುರಿಯನ್ನು ನೋಡಿಕೊಂಡು ಆಯ್ಕೆ ಮಾಡಬೇಕು. ಹುರಿಗಡಲೆ ಒಟ್ಟಾರೆ ಆಹಾರಕ್ಕೆ ಪ್ರೋಟೀನ್, ಫೈಬರ್ ಸೇರಿದಂತೆ ಹಲವು ಪೌಷ್ಟಿಕಾಂಶಗಳನ್ನು ಸೇರಿಸಿದರೆ, ವೇ ಪ್ರೋಟೀನ್ ಮುಖ್ಯವಾಗಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಪಡೆಯಲು ಬಳಸುವ ಆಯ್ಕೆಯಾಗಿದೆ.
ಹೀಗಾಗಿ ಸಾಮಾನ್ಯ ಆಹಾರದ ಮೂಲಕ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣ ಸೇರಿದಂತೆ ವಿವಿಧ ಪೌಷ್ಟಿಕಾಂಶಗಳನ್ನು ಪಡೆಯಲು ಹುರಿಗಡಲೆ ಉಪಯುಕ್ತ. ಆದರೆ ಕಡಿಮೆ ಪ್ರಮಾಣದಲ್ಲಿ ಹೆಚ್ಚಿನ ಪ್ರೋಟೀನ್ ಪಡೆಯಬೇಕೆಂದರೆ ವೇ ಪ್ರೋಟೀನ್ ಹೆಚ್ಚು ಅನುಕೂಲಕರವಾಗಬಹುದು.
ಇನ್ನು, ಈ ಪ್ರೋಟೀನ್ ಅಥವಾ ಸಪ್ಲಿಮೆಂಟ್ ತೆಗೆದುಕೊಳ್ಳುವ ಮೊದಲು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ. ಪೌಷ್ಟಿಕಾಂಶದ ಪ್ರಮಾಣ ಉತ್ಪನ್ನ ಮತ್ತು ತಯಾರಿಕಾ ವಿಧಾನಕ್ಕೆ ಅನುಗುಣವಾಗಿ ಬದಲಾಗಬಹುದು. (ಏಜೆನ್ಸೀಸ್)