ಬನ್ನೂರಿನ ಸಮೀಪದ ಮಲಿಯೂರಿನ ಗೌಡನಕಟ್ಟೆ ಕೆರೆಯ ಬಳಿಯಲ್ಲಿ ಮರಗಳನ್ನು ಕಡಿದಿರುವುದು.
ಅಧಿಕಾರಿಗಳ ಕಾರ್ಯವೈಖರಿಗೆ ಮಲಿಯೂರು ನಿವಾಸಿ ಪ್ರಸನ್ನ ಸಮಾಧಾನ
ಬನ್ನೂರು: ಪಟ್ಟಣದ ಸಮೀಪದ ಮಲಿಯೂರು ಗ್ರಾಮದ ಗೌಡನ ಕಟ್ಟೆಯ ಬಳಿಯಲ್ಲಿದ್ದ ಹೊಂಗೆ, ತೈಲ ಮರಗಳನ್ನು ಏಕಾಏಕಿ ಕಡಿದು ಹಾಳು ಮಾಡಿದರೂ ಇನ್ನೂ ಕಡಿದವರ ಮೇಲೆ ಕ್ರಮತೆಗೆದುಕೊಂಡಿಲ್ಲ. ಅದರ ಆದಾಯದ ಬಗೆಗೂ ಮಾಹಿತಿ ಇಲ್ಲ. ಯಾವ ಆಧಾರದ ಮೇಲೆ ಮರವನ್ನು ಕಡಿಯಲು ಅವಕಾಶ ನೀಡಿದಿರಿ ಎಂದು ಪಿಡಿಒಗೆ ಕೇಳಿದರೂ ಯಾವುದೇ ಮಾಹಿತಿ ಇಲ್ಲ ಎಂದು ಮಲಿಯೂರು ಗ್ರಾಮದ ನಿವಾಸಿ ಪ್ರಸನ್ನ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲಿಯೂರು ಗ್ರಾಮದ ಪಿಡಿಒ ಪುಟ್ಟಸ್ವಾಮಿ ಅವರು ಗೌಡನಕಟ್ಟೆ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿಯನ್ನು ಬಳಕೆ ಮಾಡಿಕೊಂಡು ಅದರ ಅಭಿವೃದ್ಧಿಗೆ ಮುಂದಾಗಿದ್ದಾರೆ. ಆದರೆ ಗ್ರಾಮದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಬೇಕಾಗಿರುವ ಸಿಎಸ್‌ಆರ್ ನಿಧಿಯನ್ನು ಕೆರೆಯ ಅಭಿವೃದ್ಧಿಗೆ ಬಳಸುತ್ತಿರುವುದು ನೋಡಿದರೆ ಇದರ ಬಗೆಗೆ ತೀವ್ರವಾದ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಮಲಿಯೂರಿನಲ್ಲಿ ಹಳೇ ಮಲಿಯೂರು ಹೊಸ ಮಲಿಯೂರು ಎಂದು ಭಾಗಗಳಿದ್ದು, ಹಳೇ ಮಲಿಯೂರಿನ ಸರ್ಕಾರಿ ಶಾಲೆ ಅಭಿವೃದ್ಧಿಯಾಗಬೇಕಾಗಿದೆ. ಶಾಲೆಯ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿಯನ್ನು ಬಳಕೆ ಮಾಡಿದರೆ ವಿದ್ಯಾರ್ಥಿಗಳ ಪ್ರಗತಿಗೆ ಅನುಕೂಲವಾಗುತ್ತಿತ್ತು ಎಂದು ತಿಳಿಸಿದ ಅವರು ಸಿಎಸ್‌ಆರ್ ನಿಧಿಯ ಬಳಕೆಯ ಬಗೆಗೆ ಗ್ರಾಮ ಸಭೆಯಲ್ಲಾಗಲಿ, ವಾರ್ಡ್ ಸಭೆಯಲ್ಲಾಗಲಿ ಯಾವುದೇ ಚರ್ಚೆಯನ್ನು ಮಾಡದೇ ಪಿಡಿಓ ಸಿಎಸ್‌ಆರ್ ನಿಧಿಯನ್ನು ಬಳಕೆ ಮಾಡಲು ಮುಂದಾಗಿದ್ದಾರೆಂದು ಆರೋಪಿಸಿದರು.
ವಿಷಯ ಕುರಿತು ದೂರವಾಣಿ ಮೂಲಕ ಪಿಡಿಒ ಪುಟ್ಟಸ್ವಾಮಿ ಅವರನ್ನು ಸಂಪರ್ಕಿಸಿದರೆ ಎನ್‌ಜಿಒ ಮೂಲಕ ಗೌಡನಕಟ್ಟೆಯನ್ನು ಅಭಿವೃದ್ಧಿಗೊಳಿಸಲು ಮುಂದಾಗಿದ್ದು, ಕಟ್ಟೆಯ ಬಳಿ ಗ್ರಾಮದ ಲೆಕ್ಕಾಧಿಕಾರಿಗಳು ಸರ್ವೇ ಮಾಡಿ ಅಳತೆ ನೀಡಿದ ಆಧಾರದ ಮೇಲೆ ಪಕ್ಕದಲ್ಲಿ ಬೆಳೆದಿದ್ದ ತೆಂಗಿನ ಮರಗಳನ್ನು ರೈತರೇ ಕಡಿದುಕೊಂಡು ಹೋಗಿದ್ದಾರೆಂದು ತಿಳಿಸಿದರು. ಸಿಎಸ್‌ಆರ್ ನಿಧಿಯ ಬಳಕೆಯ ಬಗೆಗೆ ಗ್ರಾಮಸಭೆಯಲ್ಲಿ ಎರಡು ಬಾರಿ ಚರ್ಚೆ ನಡೆದು ಗ್ರಾಮ ಪಂಚಾಯಿತಿ ಸದಸ್ಯರ ಅನುಮೋದನೆಯನ್ನು ಪಡೆಯಲಾಗಿದೆ ಎಂದು ತಿಳಿಸಿದರು.