ಆಲ್ದೂರು:ರಾಜ್ಯ ಹೆದ್ದಾರಿಗಳ ರಸ್ತೆ ಬದಿಗಳಲ್ಲಿ ದಟ್ಟವಾಗಿ ಬೆಳೆದಿರುವ ಪೊದೆಗಳಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು, ಅಪಾಯಕ್ಕೆ ಅಹ್ವಾನ ನೀಡುತ್ತಿವೆ.
ಆಲ್ದೂರು ಪಟ್ಟಣದಿಂದ ವಸ್ತಾರೆ ಮೂಲಕ ಚಿಕ್ಕಮಗಳೂರಿಗೆ ಸಾಗುವ ರಾಜ್ಯ ಹೆದ್ದಾರಿ 24ರಲ್ಲಿ ರಸ್ತೆ ಬದಿಗಳಲ್ಲಿ ಲಾಂಟಾನ ಗಿಡಗಳು, ಕಾಡು ಜಾತಿಯ ಮರಗಳು, ಪೊದೆಗಳು ಬೆಳೆದು ರಸ್ತೆಗೆ ವಾಲಿಕೊಂಡಿವೆ. ಇದರಿಂದ ರಸ್ತೆಯಲ್ಲಿ ಎದುರಿಗೆ ಬರುವ ವಾಹನಗಳು ಕಾಣದಂತಾಗಿದೆ. ಏಕಾಏಕಿ ವಾಹನಗಳು ನುಗ್ಗಿ ವಾಹನದ ನಿಯಂತ್ರಣ ತಪ್ಪಿ ಅಪಘಾತಳಾಗುತ್ತಿವೆ.
ಮಲೆನಾಡು ಭಾಗದಲ್ಲಿ ರಸ್ತೆಗಳು ಕಿರಿದಾಗಿದ್ದು ಕಡಿದಾದ ತಿರುವುಗಳಿವೆ. ರಸ್ತೆ ಬದಿಯಲ್ಲಿ ಬೆಳೆದಿರುವ ಪೊದೆಗಳಿಂದ ವಾಹನಗಳು ಬರುವುದು ತಿಳಿಯುವುದಿಲ್ಲ. ಲೋಕೋಪಯೋಗಿ ಇಲಾಖೆಯ ವರ್ಷಕ್ಕೊಮ್ಮೆ ರಸ್ತೆ ಬದಿ ಬೆಳೆದಿರುವ ಪೊದೆಗಳನ್ನು ತೆರವು ಮಾಡಬೇಕು. ರಸ್ತೆ ಬದಿ ಪೊದೆಗಳಿಂದಾಗಿ ವಾಹನ ಸವಾರರಿಗೆ ಎದುರು ಬರುವ ವಾಹನಗಳಿಗೆ ಜಾಗ ಕೊಡಲು ಪರದಾಡುವಂತಾಗಿದೆ. ಜು.24 ರಂದು ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಈ ಬಗ್ಗೆ ಗ್ರಾಪಂ ಮಾಜಿ ಸದಸ್ಯ ಆಶ್ರ್ ಪ್ರಸ್ತಾಪಿಸಿ ಕ್ರಮಕ್ಕೆ ಒತ್ತಾಯಿಸಿದರೂ ಈವರೆಗೂ ಕ್ರಮಕೈಗೊಂಡಿಲ್ಲ.
ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು,ಕಳಸ ಬಾಳೆಹೊನ್ನೂರು ಸ್ಥಳಗಳಿಗೆ ಪ್ರತಿನಿತ್ಯ ನೂರಾರು ಪ್ರವಾಸಿ ವಾಹನಗಳು ಸಂಚರಿಸುತ್ತವೆ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಹೊರಭಾಗದಿಂದ ಬರುವ ಪ್ರವಾಸಿಗರ ವಾಹನಗಳು ವೇಗದ ಚಾಲನೆಯಿಂದ ಕಡಿದಾದ ತಿರುವುಗಳ ಪರಿಚಯ ಇಲ್ಲದೆ ಪ್ರವಾಸಿ ವಾಹನಗಳೇ ಹೆಚ್ಚು ಅಪಘಾತವಾಗುತ್ತಿವೆ. ಆದ್ದರಿಂದ ರಸ್ತೆ ಬದಿ ಬೆಳೆದಿರುವ ಪೊದೆಗಳು, ಗಿಡಗಂಟಿಗಳನ್ನು ತೆರವು ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.