ಶಿರಾಳಕೊಪ್ಪ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಾಸೀರ್, ಸ್ಥಾಯಿಸಮಿತಿ ಅಧ್ಯಕ್ಷ ಮಹಾಬಲ, ಮುಖ್ಯಾಧಿಕಾರಿ ಹೇಮಂತ ಡೊಳ್ಳೆ ಇತರರಿದ್ದರು. 
ನ್ಯೂಸ್

ಅಮೃತ್ ಯೋಜನೆಗೆ ರಸ್ತೆಗಳು ಹಾಳು

ಶಿವಕುಮಾರ ಎಸ್.ಪಿ.

ಶಿರಾಳಕೊಪ್ಪ: ಶರಾವತಿಯಿಂದ ನೀರು ತಂದು ಪಟ್ಟಣಕ್ಕೆ ಪೂರೈಸಲು ಉದ್ದೇಶಿಸಿರುವ ಅಮೃತ್ 2.0 ಯೋಜನೆ ಅನುಷ್ಠಾನಕ್ಕೆ ಪುರಸಭೆ ಸದಸ್ಯ ಟಿ.ರಾಜು ವಿರೋಧ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆಯ ಬಿ.ಎಸ್.ಯಡಿಯೂರಪ್ಪ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಈಗ ಪೈಪ್‌ಲೈನ್ ಮಾಡುವ ಉದ್ದೇಶದಿಂದ ಗುಂಡಿ ತೆಗೆದು ಪಟ್ಟಣದ ರಸ್ತೆಗಳನ್ನು ಹಾಳು ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು. ಮುಂದಿನ 6 ತಿಂಗಳಲ್ಲಿ ಪುರಸಭೆ ಚುನಾವಣೆ ಎದುರಿಸಬೇಕಾಗಿದೆ. ಈ ರೀತಿಯ ಅಭಿವೃದ್ಧಿಯಿಂದ ಜನರಿಗೆ ತಾವು ಮುಖ ತೋರಿಸಲು ಸಾಧ್ಯವಿಲ್ಲ ಎಂದರು. ಇದಕ್ಕೆ ಉಳಿದ ಎಲ್ಲ ಸದಸ್ಯರು ಧ್ವನಿಗೂಡಿಸಿದರು.

ಅದೇ ರೀತಿ ಕುರಿ, ಕೋಳಿ ಮಾರುಕಟ್ಟೆಯಲ್ಲಿನ ಮಳಿಗೆಯ ಬಾಡಿಗೆ ದರ ಈ ಹಿಂದೆ ಹರಾಜಾಗಿರುವ ಬಾಡಿಗೆ ಮೊತ್ತಕ್ಕಿಂತ ಕಡಿಮೆ ನಿಗದಿ ಮಾಡುವುದು ಕಾನೂನು ಪ್ರಕಾರ ಒಪ್ಪಲು ಸಾಧ್ಯವಿಲ್ಲ ಎಂದರು.

ನಿರ್ಮಲಾ ಪ್ರಕಾಶ ಮಾತನಾಡಿ, ತಾವೂ ಕಾಂಗ್ರೆಸ್ ಸದಸ್ಯೆಆಗಿದ್ದರೂ ನಮ್ಮ ವಾರ್ಡಿಗೆ ಅನುದಾನ ನೀಡಿಲ್ಲ. ಮುಂದಿನ ಕ್ರಿಯಾ ಯೋಜನೆಯಲ್ಲಿ ನಮ್ಮ ವಾರ್ಡ್ ಕಡೆಗಣಿಸಿದರೆ, ಸ್ವಪಕ್ಷ ಎನ್ನುವುದನ್ನೂ ಮರೆತು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಬಿಜೆಪಿಯ ವಿಜಯಲಕ್ಷ್ಮೀ ರಟ್ಟಿಹಳ್ಳಿ ಹಾಗೂ ರಾಜೇಶ್ವರಿ ವಸಂತ ಸಹ ತಮ್ಮ ವಾರ್ಡ್‌ನಲ್ಲಿ ಕೆಲಸವಾಗುತ್ತಿಲ್ಲ ಎಂದು ದೂರಿದರು.

ನಾಮನಿರ್ದೇಶಿತ ಸದಸ್ಯ ರಾಜಾಸಾಬ್ ಮಾತನಾಡಿ, ಪುರಸಭೆ ಅಧಿಕಾರಿಗಳು ಮರಣ ಪ್ರಮಾಣ ಪತ್ರಕ್ಕೂ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸದಸ್ಯ ತಡಗಣಿ ತೇಜಪ್ಪ ಮಾತನಾಡಿ, ಒಂದು ತಿಂಗಳಿನಿಂದ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ. ಆದಷ್ಟು ಬೇಗ ಸರಿಪಡಿಸುವಂತೆ ಆಗ್ರಹಿಸಿದರು.

ಮಠದಗದ್ದೆ ಹಾಗೂ ಪಂಪ್ ಹೌಸನ ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಂಡವರಿಗೆ ಕಾನೂನು ಪ್ರಕಾರ ನೆರವು ನೀಡಲು ತೀರ್ಮಾನಿಸಲಾಯಿತು. ಇಂದಿರಾ ಕ್ಯಾಂಟೀನ್‌ಗೆ ಬೇಕಾದ ಸೌಲಭ್ಯ ಕಲ್ಪಿಸಲು, ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಹಾಗೂ ವಸತಿಗೃಹ ನಿರ್ಮಾಣಕ್ಕೆ ಸಭೆ ತೀರ್ಮಾನಿಸಿತು.

ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಾಸೀರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲ, ಮುಖ್ಯಾಧಿಕಾರಿ ಹೇಮಂತ ಡೊಳ್ಳೆ, ಮ್ಯಾನೇಜರ್ ನಿರಂಜನ್, ಅಭಿಯಂತರಾದ ರಾಘವೇಂದ್ರ, ಶೇಖರ್ ನಾಯ್ಕ ಇತರರಿದ್ದರು.